SUDDIKSHANA KANNADA NEWS/ DAVANAGERE/ DATE:02-09-2024
ಶಿವ
ಪ್ರಿಯ ಓದುಗರೇ,
ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಪ್ರತಿ ಸೋಮವಾರದಂದು ನಿಮ್ಮ ನೆಚ್ಚಿನ “ಸುದ್ದಿಕ್ಷಣ ಡಿಜಿಟಲ್ ನ್ಯೂಸ್ ಮೀಡಿಯಾ”ಕ್ಕೆ ಅಂಕಣ ಬರೆಯಲಿದ್ದಾರೆ. ಶ್ರೀಗಳ ಸಂದೇಶ ಓದಲು ಲಕ್ಷಾಂತರ ಭಕ್ತರು ಉತ್ಸುಹಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಕಣ ಪ್ರತಿ ಸೋಮವಾರದಂದು ಪ್ರಕಟವಾಗಲಿದೆ.
-“ಸುದ್ದಿಕ್ಷಣ ಡಿಜಿಟಲ್ ನ್ಯೂಸ್ ಮೀಡಿಯಾ” ಸಂಪಾದಕೀಯ ಮಂಡಳಿ
ಅಧಿಕಾರ ಮತ್ತು ಸಂಪತ್ತು ಎಲ್ಲೆಲ್ಲಿ ಇರುತ್ತವೆಯೋ ಅಲ್ಲೆಲ್ಲಾ ಅವುಗಳಿಗಾಗಿ ಹಪಹಪಿಸುವ ಜನರು ಇದ್ದೇ ಇರುತ್ತಾರೆ. ಅದು ರಾಜಕೀಯ ಕ್ಷೇತ್ರವಿರಬಹುದು, ಸಾಮಾಜಿಕ ಕ್ಷೇತ್ರವಿರಬಹುದು ಅಥವಾ ಧಾರ್ಮಿಕ ಕ್ಷೇತ್ರವೇ ಆಗಿರಬಹುದು. ರಾಜ ಮಹಾರಾಜರುಗಳ ಕಾಲದಲ್ಲಿ ಅಧಿಕಾರ ಲಾಲಸೆಯಿಂದ ಅನೇಕ ಒಳಸಂಚುಗಳನ್ನು ಮಾಡಿರುವುದು ಇತಿಹಾಸದಲ್ಲಿ ಕಂಡುಬರುತ್ತದೆ.
ಟಿಪ್ಪುವಿಗೊಬ್ಬ ಮೀರ್ ಸಾದಿಕ್, ಸೀಜರಿನಿಗೊಬ್ಬ ಬ್ರೂಟಸ್, ಡಂಕನ್ ದೊರೆಗೊಬ್ಬಳು ಲೇಡಿ ಮ್ಯಾಕ್ ಬೆತ್. ಹೀಗೆ ಸಮಯ ಸಂದರ್ಭ ನೋಡಿಕೊಂಡು ಕೈಕೊಟ್ಟು ಬೆನ್ನಿಗೆ ಚೂರಿ ಹಾಕಿದ ನಿದರ್ಶನಗಳು ಇತಿಹಾಸದಲ್ಲಿ ಬೇಕಾದಷ್ಟು ಸಿಗುತ್ತವೆ. ಸ್ವಾರ್ಥ ಮತ್ತು ಕೃತಘ್ನತೆಯಲ್ಲಿ ಮನುಷ್ಯನನ್ನು ಮೀರಿಸುವ ಕ್ರೂರ ಪ್ರಾಣಿ ಮತ್ತೊಂದಿಲ್ಲ. ಜೀವದ ಗೆಳೆಯನಾಗಿದ್ದ ಬ್ರೂಟಸ್ ವಿದ್ರೋಹಿಗಳ ಜೊತೆ ಸೇರಿ ತನ್ನನ್ನು ಇರಿಯುತ್ತಿರುವುದನ್ನು ನೋಡಿ ಕತ್ತಿಯ ಇರಿತದ ನೋವಿಗಿಂತ ಹೆಚ್ಚಾಗಿ ಮಿತ್ರದ್ರೋಹದ ನೋವಿನಿಂದ ಆಘಾತಗೊಂಡ ಜೂಲಿಯಸ್ ಸೀಜರ್ “You too Brutus!” ಎಂದು ಹೃದಯವಿದ್ರಾವಕವಾದ ಮೂರೇ ಮೂರು ಶಬ್ದಗಳನ್ನಾಡಿ ಕೊನೆಯುಸಿರೆಳೆಯುತ್ತಾನೆ.
ಔತಣ ಕೂಟದ ನೆಪದಲ್ಲಿ ಡಂಕನ್ ದೊರೆಯನ್ನು ಆಹ್ವಾನಿಸಿ ಅಮಾನವೀಯವಾಗಿ ಇರಿದು ಕೊಂದ ಲೇಡಿ ಮ್ಯಾಕ್ಬೆತ್ ತನ್ನ ರಕ್ತಸಿಕ್ತ ಹಸ್ತಗಳನ್ನು ನೋಡಿಕೊಳ್ಳುತ್ತಾ “All the perfumes of Arabia will not sweeten this little hand” (ನನ್ನ ಕೈಗಳಿಗೆ ಮೆತ್ತಿದ ಈ ರಕ್ತದ ವಾಸನೆ ಇಡೀ ಅರೇಬಿಯಾದ ಸುಗಂಧ ದ್ರವ್ಯಗಳನ್ನು ಒಟ್ಟುಗೂಡಿಸಿ ಹಚ್ಚಿದರೂ ಹೋಗುವುದಿಲ್ಲ) ಎಂದು ಪರಿತಪಿಸುತ್ತಾಳೆ. ಕೊನೆಯ ಪಕ್ಷ ಆಕೆಗೆ ತನ್ನ ಹೇಯಕೃತ್ಯದ ಅರಿವಾಗಿ ಪಶ್ಚಾತ್ತಾಪ ಪಟ್ಟುಕೊಂಡಂತೆ ಷೇಕ್ಸ್ ಪಿಯರ್ ಚಿತ್ರಿಸಿದ್ದಾನೆ.
ಆದರೆ ನಿಜ ಜೀವನದಲ್ಲಿ ತಪ್ಪು ಮಾಡಿದ ದುಷ್ಟ ವ್ಯಕ್ತಿ ಹಾಗೆ ಪರಿತಪಿಸುವುದು ಬಹಳ ವಿರಳ. ತನ್ನದೇನೂ ತಪ್ಪಿಲ್ಲವೆಂದೇ ಅವನ ವರ್ತನೆ. ನಮ್ಮ ದೇಶದಲ್ಲಿಯೇ ಮೊಟ್ಟ ಮೊದಲಿಗೆ ಬ್ರಿಟೀಷರನ್ನು ಸೋಲಿಸಿದ ಕಿತ್ತೂರು ರಾಣಿ ಚೆನ್ನಮ್ಮ ಮೋಸ ಹೋಗಿದ್ದು ಯಾರಿಂದ? ಮೈಸೂರು ಹುಲಿ ಟಿಪ್ಪು ಸುಲ್ತಾನನು ಮೋಸ ಹೋಗಿದ್ದು ಯಾರಿಂದ?
ನಮ್ಮ ಮಠದ ಇತಿಹಾಸದಲ್ಲಿಯೇ ನಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ 1938 ಆಗಸ್ಟ್ 11 ರಂದು ವಿಷ ಉಣಿಸಿ ಕೊಂದವರು ಯಾರು? ಮಠದಲ್ಲಿಯೇ ಇದ್ದು ಒಳಸಂಚು ಮಾಡಿ ಹಗೆತನವನ್ನು ಸಾಧಿಸಿದ ಕುಟಿಲ ಕಾವಿಧಾರಿಗಳು. “ಶಿವದಾನ”ವೆನಿಸಿದ ಮಜ್ಜಿಗೆಯಲ್ಲಿ ಶಿವದ್ರೋಹದ ಷಡ್ಯಂತ್ರ ನಡೆದಿದೆಯೆಂಬುದನ್ನು ಶಿವಭಾವದ ಹೃದಯವು ಅರಿಯದೇ ಹೋಯಿತು. ಇವನ್ನೆಲ್ಲಾ ನೋಡಿದಾಗ ಕಂಡು ಬರುವ ಸತ್ಯಸಂಗತಿಯೆಂದರೆ ಸ್ವಾರ್ಥ ಸಾಧನೆಗಾಗಿ ಮಾಡುವ ಹೇಯ ಕೃತ್ಯಗಳು ದೇಶಾತೀತ ಮತ್ತು ಕಾಲಾತೀತ.






