SUDDIKSHANA KANNADA NEWS/ DAVANAGERE/ DATE-25-04-2025
ದಾವಣಗೆರೆ: ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್ ನಲ್ಲಿ ಭಯೋತ್ಪಾದಕರು ನಿರ್ದೋಷಿ ಪ್ರವಾಸಿಗರ ಮೇಲೆ ನಡೆಸಿದ ಹೀನಕೃತ್ಯ ದೇಶದ ಜನಮನವನ್ನು ಬೆಚ್ಚಿ ಬೀಳಿಸಿದ್ದು, ಈ ಕೃತ್ಯವನ್ನು ದಾವಣಗೆರೆ ಸಂಸದೆ ಡಾ| ಪ್ರಭಾ ಮಲ್ಲಿಕಾರ್ಜುನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಇದು ರಾಷ್ಟ್ರದ ಏಕತೆ ಮತ್ತು ಅಖಂಡತೆಯ ಮೇಲೆ ನೇರದಾಳಿ ಆಗಿದ್ದು, ಅತ್ಯಂತ ಶೋಕಾಜನಕ ಹಾಗೂ ಧಿಕ್ಕಾರಾರ್ಹ ಘಟನೆ ಆಗಿದೆ ಎಂದು ಅಭಿಪ್ರಾಯಪಟ್ಟಿರುವ ಈ ದಾಳಿಯು 2000ರ ಚಿಟ್ಟಿಸಿಂಘಪುರ ನರಮೇಧದ ನಂತರದ ಅತ್ಯಂತ ಘೋರ ಘಟನೆಗಳಲ್ಲಿ ಒಂದಾಗಿದೆ. ನಿರಾಯುಧ ನಾಗರಿಕರನ್ನು ಗುರಿಯಾಗಿಸುವ ಈ ಕೃತ್ಯವನ್ನು ಎತ್ತಿ ಹಿಡಿಯುವುದು ಮಾನವೀಯತೆಯ ವಿರುದ್ದದ ನಡೆ ಎಂದು ತಿಳಿಸಿದ್ದಾರೆ.
ಈ ಘಟನೆ ರಾಜಕೀಯಕ್ಕೆ ಜಾಗವಿಲ್ಲ. ನಾವು ಒಟ್ಟಾಗಿ ನಿಂತು, ಶೋಕಸಂತಪ್ತ ಕುಟುಂಬಗಳಿಗೆ ನ್ಯಾಯ ದೊರಕಿಸಲು ಶ್ರಮಿಸಬೇಕಿದೆ. ಕರ್ನಾಟಕದ ಪ್ರವಾಸಿಗರಾದ ಮೂವರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದು, ಅತ್ಯಂತ ನೋವಿನ ಸಂಗತಿ ಎಂದು ತಿಳಿಸಿರುವ ಅವರು ಮೃತ ಪಟ್ಟ ಕುಟುಂಬದವರಿಗೆ ನಾನು ವೈಯಕ್ತಿಕವಾಗಿ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರದಿಂದ ಸಚಿವರಾದ ಸಂತೋಷ್ ಲಾಡ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದು, ಪ್ರವಾಸಿಗರ ಭೇಟಿ ಮಾಡಿ ಸಂತ್ರಸ್ತರ ಪರವಾಗಿ ಅವರ ವಾಪಸ್ಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರವಾಸಿಗರಿಗೆ ಎಲ್ಲಾ ರೀತಿಯ ನೆರವು ದೊರೆಯುವಂತೆ ನೋಡಿಕೊಳ್ಳಬೇಕೆಂದು ವಿನಂತಿಸಿದ್ದೇನೆ ಎಂದರು.
ಪ್ರವಾಸೋದ್ಯಮವೇ ಕಾಶ್ಮೀರದ ಆರ್ಥಿಕ ಶಕ್ತಿ. ಈಗ ಈ ಘಟನೆಯಿಂದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬಿದ್ದಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ತಕ್ಷಣ ಕ್ರಮ ಕೈಗೊಂಡು, ಕಾಶ್ಮೀರದ ಜನರಿಗೆ ನೆರವು ನೀಡಬೇಕು. ಇದು ಭಾರತ ದೇಶದ ಮೇಲೆ ನೇರದಾಳಿ. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಇದಕ್ಕೆ ಹೊಣೆ ಹೊತ್ತಿರುವುದಾಗಿ ಘೋಷಿಸಿದೆ. ಸರ್ಕಾರವು ಕೇವಲ ಮಾತುಗಳಲ್ಲ, ಕೃತಿಗಳಲ್ಲೂ ಸ್ಪಷ್ಟತೆಯನ್ನು ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಮರನಾಥ ಯಾತ್ರೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ, ಯಾತ್ರಿಕರಿಗೆ ಸಮರ್ಪಕ ಭದ್ರತೆ ಒದಗಿಸಬೇಕು. ಕೇಂದ್ರ ಸರ್ಕಾರವು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸಿ ಭಯೋತ್ಪಾದನೆಯ ವಿರುದ್ಧ ಸಂಯುಕ್ತ ರಣತಂತ್ರ ರೂಪಿಸಬೇಕು, ಕಾಂಗ್ರೆಸ್ ಪಕ್ಷವು ಯಾವಾಗಲೂ ಭಯೋತ್ಪಾದನೆ ಮತ್ತು ವಿಭಜನೆಯ ವಿರುದ್ಧ ಹೋರಾಡುತ್ತಾ ಬಂದಿದೆ. ಈ ಹೋರಾಟದಲ್ಲಿ ನಮ್ಮ ನಾಯಕರು ಪ್ರಾಣತ್ಯಾಗ ಮಾಡಿದ ಇತಿಹಾಸವೂ ಇದೆ ಎಂದು ತಿಳಿಸಿದ್ದಾರೆ.