SUDDIKSHANA KANNADA NEWS/ DAVANAGERE/ DATE:23-09-2024
ದಾವಣಗೆರೆ: ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ನಾಯಕ ಸಮಾಜದ ಹಿರಿಯರು, ಜೆಡಿಎಸ್ ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷರಾದ ಟಿ.ದಾಸಕರಿಯಪ್ಪ ವಿಧಿವಶರಾಗಿದ್ದಾರೆ.
ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರರಾದ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಗಣೇಶ ದಾಸಕರಿಯಪ್ಪ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಯುವ ಮುಖಂಡ ಟಿ.ಶ್ರೀನಿವಾಸ ದಾಸಕರಿಯಪ್ಪ, ಮೂವರು ಪುತ್ರಿಯರೂ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ನಗರದ ತಮ್ಮ ಸ್ವಗೃಹದಲ್ಲಿ ಭಾನುವಾರ ತಡರಾತ್ರಿ ನಿಧನರಾದರು. ಮೃತರ ಅಂತ್ಯಕ್ರಿಯೆ ಸೆ.23ರಂದು ಮಧ್ಯಾಹ್ನ 2 ಗಂಟೆ ಸ್ವಗ್ರಾಮವಾದ ದಾವಣಗೆರೆ ತಾಲೂಕಿನ ತುಂಬಿಗೆರೆ ಗ್ರಾಮದಲ್ಲಿರುವ ಸ್ವಂತ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
ತುಂಬಿಗೆರೆ ಗ್ರಾಮದವರಾದ ಟಿ. ದಾಸಕರಿಯಪ್ಪ ಅವರು ಹೆಸರಾಂತ ಕುಸ್ತಿಪಟು. ಪೈಲ್ವಾನ್ ದಾಸಕರಿಯಪ್ಪ ಅಂತಾನೂ ಕರೆಯುತ್ತಿದ್ದರು. ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಜೊತೆಗೆ ಜನತಾದಳದೊಂದಿಗೆ
ರಾಜಕೀಯದಲ್ಲಿ ಸಕ್ರಿಯರಾಗಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಜೆ. ಹೆಚ್. ಪಟೇಲ್, ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ ಎಂ. ಪಿ. ಪ್ರಕಾಶ್, ಮಾಜಿ ಶಾಸಕ ಕೆ. ಮಲ್ಲಪ್ಪ ಅವರ
ಜೊತೆ ಆಪ್ತ ಒಡನಾಟ ಹೊಂದಿದ್ದ ಟಿ. ದಾಸಕರಿಯಪ್ಪ ಅವರು ದಾವಣಗೆರೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ, ದೂಡಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ, ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷರಾಗಿಯೂ ಉತ್ತಮ ಸೇವೆ ಸಲ್ಲಿಸಿದ್ದರು. ತುಂಬಿಗೆರೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕನ್ವೀನರ್ ಆಗಿ, ಹಮಾಲರ ಸಂಘದ ಗೌರವ ಕಾರ್ಯದರ್ಶಿಯಾಗಿ, ದಾವಣಗೆರೆ ಎಪಿಎಂಸಿ ಮಾರ್ಕೆಟ್ ನ ಶ್ರೀ ಗಣಪತಿ ದೇವಸ್ಥಾನದ ಉಪಾಧ್ಯಕ್ಷರಾಗಿ, ಶ್ರೀ ವೀರ ಮದಕರಿ ನಾಯಕ ವೃತ್ತದ ಕೆರೆ ಗರಡಿ ಮನೆ ಅಧ್ಯಕ್ಷರಾಗಿ ಮತ್ತು ಇತರೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.