SUDDIKSHANA KANNADA NEWS/ DAVANAGERE/ DATE:16-02-2025
ದಾವಣಗೆರೆ: ಕುಟುಂಬ ರಾಜಕಾರಣದ ವಿರುದ್ಧ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಬದಲಾವಣೆಯ ಪರ್ವದ ಸಂಕೇತ. ವೈಚಾರಿಕತೆ ಬೀಜ ಬಿತ್ತಬೇಕೆಂಬುದು ನಮ್ಮ ಉದ್ದೇಶವೇ ಹೊರತು ದಾವಣಗೆರೆಯ ಕುಟುಂಬವೊಂದರ ವಿರುದ್ಧ ಮಾಡುತ್ತಿರುವ ಆಂದೋಲನ ಅಲ್ಲ. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕುಟುಂಬ ರಾಜಕಾರಣ ಹಾಸುಹೊಕ್ಕಾಗಿದ್ದು, ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು.
ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಯೋಗ ಮಂದಿರದಲ್ಲಿ ಸ್ವಾಭಿಮಾನಿ ಬಳಗವು ಏರ್ಪಡಿಸಿದ್ದ ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ? ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ
ವಿತರಣೆ ಹಾಗೂ ವಿಚಾರ ಸಂಕ್ರಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 34 ಕುಟುಂಬಗಳು ಬಲಿಷ್ಠವಾಗಿ ಬೆಳೆದು 140 ಕೋಟಿ ಜನರನ್ನು ನಿಯಂತ್ರಿಸುತ್ತಿವೆ. ಅವರೆಲ್ಲಾ ರಾಜ, ರಾಣಿಯಂತೆ ಬದುಕುತ್ತಿದ್ದಾರೆ. ಈ ವ್ಯವಸ್ಥೆ ಬದಲಾಗಬೇಕಿದೆ ಎಂದು ಪ್ರತಿಪಾದಿಸಿದರು.
ಹಣವಿದ್ದವರು ಚುನಾವಣೆಯಲ್ಲಿ ಗೆದ್ದ ಮೇಲೆ ಗದರುತ್ತಾರೆ, ಜೋರು ಮಾಡುತ್ತಾರೆ. ದುರಹಂಕಾರ ತೋರುತ್ತಾರೆ. ವಿನಯತೆಯೇ ಇರುವುದಿಲ್ಲ. ಯಾಕೆಂದರೆ ಚುನಾವಣೆಯಲ್ಲಿ ತನ್ನ ಎದುರಾಳಿ ಖರ್ಚು ಮಾಡುವ ಹಣಕ್ಕಿಂತ ದುಪ್ಪಣ ಹಣ
ಕೊಟ್ಟು ಗೆಲ್ಲುತ್ತೇವೆಂಬ ಆತ್ಮವಿಶ್ವಾಸ ಅವರಲ್ಲಿ ಇರುವ ಕಾರಣ ಈ ವರ್ತನೆ ಬಂದಿದೆ. ಗೆದ್ದ ಮೇಲೆ ಒಂದು ಫ್ಯಾಕ್ಟರಿ ಇದ್ದದ್ದು ಮೂರು, ಒಂದು ಮಿಲ್ ಇದ್ದದ್ದು ಹತ್ತು ಮಿಲ್ ಆಗುತ್ತದೆ. ಇಂಥ ವ್ಯವಸ್ಥೆ ಸೃಷ್ಟಿಯಾಗಿದೆ. ಆದ್ರೆ ನಾವು ನೋಡಿಕೊಂಡು, ಸಹಿಸಿಕೊಂಡು ಗೊತ್ತಿದ್ದರೂ ಮಾತನಾಡದೇ ಹೋಗುತ್ತಿದ್ದೇವೆ. ಇದರ ವಿರುದ್ದ ಹೋರಾಡುವ ಧೈರ್ಯ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಲು ಹಿಂದೇಟು ಹಾಗೂ ಭಯಪಡುವ ಇಂಥ ವಾತಾವರಣದಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಮಾತನಾಡಿರುವುದು ಒಳ್ಳೆಯ ಬೆಳವಣಿಗೆ. ದಾವಣಗೆರೆ ವ್ಯಾಪಾರ ಕೇಂದ್ರೀತ ನಗರ. ಸಾಂಸ್ಕೃತಿಕ, ವಿಚಾರವಂತ, ಬುದ್ಧವಂತ ನಗರವನ್ನಾಗಿ ಪರಿವರ್ತಿಸಬೇಕೆಂಬುದು ನಮ್ಮ ಉದ್ದೇಶ. ಪ್ರಜಾಪ್ರಭುತ್ವದಲ್ಲಿ ಅನಿಸಿಕೆಯನ್ನು ಅಂಜಿಕೆ, ಅಳುಕು ಇಲ್ಲದೇ ವ್ಯಕ್ತಪಡಿಸಬೇಕು. ಕುಟುಂಬ ರಾಜಕಾರಣದ ಬಗ್ಗೆ ರಾಷ್ಟ್ರ, ರಾಜ್ಯ, ಜಿಲ್ಲೆ, ಊರು, ಮನೆಮನೆಗಳಲ್ಲಿಯೂ ಚರ್ಚೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಲೋಕಸಭೆ ಚುನಾವಣೆಗೆ ಮುನ್ನ 650 ಕಿಲೋಮೀಟರ್ ಪಾದಯಾತ್ರೆ ನಡೆಸಿ 900 ಹಳ್ಳಿಗಳಿಗೆ ಭೇಟಿ ನೀಡಿದ್ದೆ. ಪ್ರತಿಯೊಬ್ಬರ ಬಳಿ ವಿಶ್ವಾಸ ಗಳಿಸಿ ನ್ಯಾಯಯುತ, ಪ್ರಜಾಸತ್ತಾತ್ಮಕವಾಗಿ ಟಿಕೆಟ್ ಪಡೆಯಲು ಯತ್ನ ಮಾಡಿದೆ. ಟಿಕೆಟ್ ಸಿಗುವ ಆಶಾಭಾವನೆ ಇತ್ತು, ಆದ್ರೆ ಸಿಗಲಿಲ್ಲ. ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದವರು ನೇರವಾಗಿ ಹೋಗಿ ಟಿಕೆಟ್ ತಂದರು. ಜನರ ಮಧ್ಯೆ ವ್ಯಕ್ತಿತ್ವ ಇಟ್ಟು, ಸಮಸ್ಯೆ ಆಲಿಸಿ ಟಿಕೆಟ್ ತರುವ ವಾತಾವರಣ ಇಲ್ಲ. ಚುನಾವಣೆಗೆ ಸ್ಪರ್ಧಿಸಬೇಕಾದರೆ ಹಣ ಮತ್ತು ಪ್ರಬಲ ಜಾತಿ ಮುಖ್ಯ ಎಂಬ ವಾತಾವರಣ ನಿರ್ಮಾಣವಾಗಿದೆ. ನಾನು ಚುನಾವಣೆಗೆ ಟಿಕೆಟ್ ಕೇಳಿದಾಗ ಸಿಎಂ, ಡಿಸಿಎಂ, ರಾಜಕೀಯ ಮುಖಂಡರು ಕೇಳಿದ್ದು ಒಂದೇ ಮಾತು, ನಿನ್ನ ಬಳಿ ದುಡ್ಡಿದೆಯಾ ಎಂದು. ಯಾರು ನೀನು? ವ್ಯಕ್ತಿತ್ವ ಏನು? ಜನರೊಡನೆ ಬೆರೆತ ಬಗೆ, ಸಮಸ್ಯೆಗಳ ಬಗ್ಗೆ ಕೇಳಲಿಲ್ಲ. ದುಡ್ಡು ಇಟ್ಟಿದೆಯಾ ಓಡಾಡು, ಭೇಟಿಯಾಗು ಎಂದರು. ಕೇವಲ ಹದಿನೈದು ದಿನಗಳಲ್ಲಿ ಟಿಕೆಟ್ ತಂದು ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಗೆದ್ದು ಹೋಗುತ್ತಾರೆ, ಆಮೇಲೆ ಜನರನ್ನೇ ಮರೆತುಬಿಡುತ್ತಾರೆ ಎಂದು ಹೇಳಿದರು.
ಗೆದ್ದವರು ಅವರ ಕುಟುಂಬದ ಏಳಿಗೆ ಅಷ್ಟೇ ಗಮನಕೇಂದ್ರೀಕರಿಸುತ್ತಾರೆ. ಕ್ಷೇತ್ರದ ಅಭಿವೃದ್ದಿ ಬೇಕಿಲ್ಲ. ನಗರ ಪ್ರದೇಶದವರಿಗಿಂತ ಹಳ್ಳಿಗಳ ಜನರು ಪರಾವಲಂಬಿಗಳಾಗಬೇಕು. ಆದ್ರೆ, ದೊಡ್ಡ ಸಮಾವೇಶ ನಡೆಯುವುದು ಕುರ್ಚಿ ಗಟ್ಟಿಮಾಡಲು ಹೊರತು ಶೋಷಿತರ ಅಭಿವೃದ್ಧಿಗಲ್ಲ. ಸಹಿಸಿಕೊಂಡು ಹೋಗುತ್ತಿದ್ದೇವೆ. ಇಂದಿನ ಯುವಕರು, ಯುವತಿಯರು ಗಟ್ಟಿಯಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು. ನಿರ್ಭೀತಿಯಿಂದ ನಡೆಯಬೇಕು ಎಂದು ಕಿವಿಮಾತು ಹೇಳಿದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಕಾರ್ಯಕ್ರಮ ಮಾಡಿಲ್ಲ. ನನ್ನ ರೀತಿ 100 ಜನರು ಬೆಳೆಯಬೇಕು. ರಾಜ್ಯ, ಜಿಲ್ಲೆಯಲ್ಲಿ ಈ ರೀತಿ ಬೆಳೆದರೆ ಅಧಿಕಾರ ವಿಕೇಂದ್ರೀಕರಣ ಆಗುತ್ತದೆ. ಒಬ್ಬ ವ್ಯಕ್ತಿ ಮೇಲೆ ವ್ಯವಸ್ಥೆ ಸೃಷ್ಟಿಯಾಗಬಾರದು. ನಾಯಕತ್ವವೂ ಬೇಕು. ಪ್ರಜಾಪ್ರಭುತ್ವ ಆಶಯವೂ ಉಳಿಯಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು.
ಜಾತಿ ರಾಜಕಾರಣ, ಅಂಬೇಡ್ಕರ್, ದೇಶದ ಅಭಿವೃದ್ಧಿ, ಜನರಿಗೆ ಹತ್ತಿರವಾಗುವ ವಿಚಾರಗಳ ಕುರಿತಂತೆ ಇನ್ನೆರಡು ತಿಂಗಳಿನಲ್ಲಿ ಪ್ರಬಂಧ ಸ್ಪರ್ಧೆ, ವಿಚಾರ ಸಂಕಿರಣ ಆಯೋಜಿಸಲಾಗುವುದು. ಸಂವಿಧಾನ ಸೇರಿದಂತೆ ಪ್ರಚಲಿತ ವಿಚಾರಗಳು ಪ್ರಜೆಗಳಲ್ಲಿ ನಿರಂತರವಾಗಿ ಚರ್ಚೆಯಾಗಬೇಕು ಎಂಬ ಆಲೋಚನೆ ದೃಷ್ಟಿಯಿಂದ ಆಯೋಜಿಸಲಾಗುವುದು ಎಂದು ಹೇಳಿದರು.
ಯಾವ ಪಕ್ಷದೊಳಗೆ ಪ್ರಜಾಪ್ರಭುತ್ವವೇ ಇಲ್ಲದಂತಾಗಿದೆ. ಚುನಾವಣೆ ಆದ ಮೇಲೆ ನಾನು ವಿಶ್ರಾಂತಿ ಪಡೆಯಬಹುದಿತ್ತು. ಆದ್ರೆ, ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಬೀದರ್, ರಾಯಚೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಪ್ರಜ್ಞೆ ಮೂಡಿಸುತ್ತಿದ್ದೇನೆ. ಜನರು ಕುಟುಂಬ ಆಧಾರಿತ ರಾಜಕೀಯ ಕೈಹಿಡಿಯುತ್ತಾರೆಂದು ಭ್ರಮನಿರಸನಕ್ಕೊಳಗಾಗಿ ಕೂರಲಿಲ್ಲ. ಮುಂಬರುವ ದಿನಗಳಲ್ಲಿ ಯಶಸ್ಸು ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಹಾಗೂ ರಾಜಕಾರಣಿ ತೇಜಸ್ವಿ ಪಟೇಲ್ , ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಹೆಚ್. ಅರುಣ್ ಕುಮಾರ್, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್, ವಕೀಲರಾದ ಸಿ. ಪಿ. ಅನಿತಾ, ಚಿತ್ರನಿರ್ದೇಶಕರು, ಉಪನ್ಯಾಸಕ ಮಾರುತಿ ಶಾಲೆಮನೆ, ಎಸ್. ಎಂ. ಕೃಷ್ಣ ಕಾೇಜಿನ ಪ್ರಾಂಶುಪಾಲರಾದ ಕೆ. ಎಸ್. ಗಂಗಾಧರ್ ಮತ್ತಿತರರು ಹಾಜರಿದ್ದರು.





