SUDDIKSHANA KANNADA NEWS/ DAVANAGERE/ DATE:03-04-2025
ದಾವಣಗೆರೆ: ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿರುವ ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವು ಈ ಮೂಲಕ ಮುಸ್ಲಿಮರನ್ನು ಕಡೆಗಣಿಸುವ, ವೈಯಕ್ತಿಕ ಕಾನೂನುಗಳು ಮತ್ತು ಆಸ್ತಿ ಕಸಿದುಕೊಳ್ಳುವ ಗುರಿಯನ್ನು ಹೊಂದಿರುವ ಅಸ್ತ್ರವಾಗಿದೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಅಲ್ಪಸಂಖ್ಯಾತ ಸಮುದಾಯದವರ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶದಿಂದಲೇ ವಕ್ಫ್ ತಿದ್ದುಪಡಿ ಕಾನೂನು ಜಾರಿಗೊಳಿಸಲಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ರೂಪಿಸಬೇಕಾಗಿದೆ. ಒಂದು ಧರ್ಮದವರನ್ನು ಗುರಿಯಾಗಿಸಿ ನಡೆಸಿರುವ ವ್ಯವಸ್ಥಿತ ದಾಳಿ ಎಂದು ಪ್ರತಿಕ್ರಿಯಿಸಿದ್ದಾರೆ.
ಆರ್‌ಎಸ್‌ಎಸ್, ಬಿಜೆಪಿ ಮತ್ತು ಮಿತ್ರಪಕ್ಷಗಳಿಂದ ಸಂವಿಧಾನದ ಮೇಲಿನ ಈ ದಾಳಿಯು ಇಂದು ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿದೆ. ಆದರೆ ಭವಿಷ್ಯದಲ್ಲಿ ಇತರ ಸಮುದಾಯಗಳನ್ನು ಗುರಿಯಾಗಿರಿಕೊಳ್ಳಲು ಒಂದು ಪೂರ್ವನಿದರ್ಶನ ಎಂದರೆ ತಪ್ಪಾಗಲಾರದು ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ವಕ್ಫ್ ತಿದ್ದುಪಡಿ ಮಸೂದೆಯನ್ನು ಬಲವಾಗಿ ವಿರೋಧಿಸುತ್ತದೆ. ಏಕೆಂದರೆ ಇದು ಭಾರತದ ಕಲ್ಪನೆಯ ಮೇಲೆಯೇ ನಡೆದ ದಾಳಿ ಆಗಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ವಿಧಿ 25 ಅನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ಧಕ್ಕೆ ತರುವ ಕರಾಳವಾದಂಥ ಕಾನೂನು ಇದಾಗಿದೆ. ಈ ಮಸೂದೆ ವಿರುದ್ಧ ಹೋರಾಡಲು ಎಲ್ಲರ ಸಹಕಾರ ಅಗತ್ಯ ಇದೆ. ಮುಸ್ಲಿಂ ಸಮುದಾಯದ ಆಸ್ತಿಗಳನ್ನು ಕಬಳಿಸಲು ಕೇಂದ್ರ ಸರ್ಕಾರವು ನಡೆಸಿರುವ ಹುನ್ನಾರ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.