SUDDIKSHANA KANNADA NEWS/ DAVANAGERE/ DATE:01-02-2025
ದಾವಣಗೆರೆ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸ್ವಾಭಿಮಾನಿ ಬಳಗ ನಿರ್ಧರಿಸಿದೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ವಾಭಿಮಾನಿ ಬಳಗದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಈ ವಿಚಾರವನ್ನು ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಭಿಮಾನಿ ಬಳಗವು ಯಾವುದೇ ರಾಜಕೀಯ ದ್ವೇಷ ಇಟ್ಟುಕೊಂಡು ರಚನೆಯಾಗಿಲ್ಲ. ರಚನಾತ್ಮಕ, ಸೃಜನಾತ್ಮಕ, ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ
ಜನರಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದೆ. ನಾವು ಯಾರ ವಿರುದ್ಧವೂ ರಾಜಕಾರಣ ಮಾಡುತ್ತಿಲ್ಲ. ಯಾರ ವಿರುದ್ಧವೂ ದ್ವೇಷ ಹೊಂದಿಲ್ಲ. ನಮ್ಮದೇನಿದ್ದರೂ ಜನಪರ ಕಾಳಜಿಯುಳ್ಳ
ಆಲೋಚನೆ ಮಾತ್ರ ಎಂದು ಹೇಳಿದರು.
ದಿನಕಳೆದಂತೆ ಸ್ವಾಭಿಮಾನಿ ಬಳಗದ ಕಾರ್ಯಕ್ರಮಗಳಿಗೆ ಜನರು ಭಾರೀ ಸ್ಪಂದನೆ ತೋರುತ್ತಿದ್ದಾರೆ. ಮುಂಬರುವ ದಾವಣಗೆರೆ ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿಯೂ ಸ್ವಾಭಿಮಾನಿ ಬಳಗದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದರು.
ಕುಟುಂಬ ರಾಜಕಾರಣದ ಬಗ್ಗೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು ಸರಿ ಇದೆ. ಆದ್ರೆ, ಇದನ್ನು ವಿರೋಧ ಪಡಿಸಿದವರ ಅಭಿಪ್ರಾಯ ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಇಡೀ ದೇಶದಲ್ಲಿ ಕುಟುಂಬ
ರಾಜಕಾರಣ ಹಾಸುಹೊಕ್ಕಾಗಿದೆ. ಇದರ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಜಿ. ಬಿ. ವಿನಯ್ ಕುಮಾರ್ ಮಾಹಿತಿ ನೀಡಿದರು.