SUDDIKSHANA KANNADA NEWS/ DAVANAGERE/ DATE-06-06-2025
ಬೆಂಗಳೂರು ದಾವಣಗೆರೆ:ಉಪ ಖನಿಜಗಳನ್ನು ಸಾಗಿಸಲು ಸರಕು ಮತ್ತು ಸೇವಾ ತೆರಿಗೆ ಪೋರ್ಟಲ್ ಮೂಲಕ ಸೃಜಿಸಲಾಗುವ ಇ-ವೇ ಬಿಲ್ಲನ್ನು ಖನಿಜ ಸಾಗಾಣಿಕೆ ಪರವಾನಿಗೆಯೊಂದಿಗೆ ಏಕೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ನಿರ್ದಿಷ್ಟವಲ್ಲದ ಕಲ್ಲುಗಣಿ ಗುತ್ತಿಗೆ ಪ್ರದೇಶಗಳನ್ನು ಕೆ ಎಸ್ ಆರ್ ಎಸ್ ಎ ಸಿ ಅವರಿಂದ ಡ್ರೋನ್ ಇಲ್ಲವೇ ಡಿಜಿಪಿಎಸ್ ಸಮೀಕ್ಷೆ ಕೈಗೊಂಡು ಪ್ರಸ್ತುತ ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಮತ್ತು ಗುತ್ತಿಗೆ ಪ್ರದೇಶದ ಹೊರಭಾಗದಲ್ಲಿ ತೆಗೆದಿರುವ ಖನಿಜ ಪ್ರಮಾಣವನ್ನು ಘನೀಕರಿಸುವ ಸಂಬಂಧ ಕಾರ್ಯಾದೇಶ ನೀಡಲಾಗಿದೆ. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಮುಕ್ತಾಯಗೊಳಿಸಿ ಗುತ್ತಿಗೆ ಪ್ರದೇಶಗಳ ಪ್ರಸ್ತುತ ಅಳತೆಗಳನ್ನು ಘನೀಕರಿಸಿದೆ. ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ತೆಗೆದು ಸಾಗಾಣಿಕೆ ಮಾಡಿರುವ ಉಪ ಖನಿಜದ ಪ್ರಮಾಣವನ್ನು ನಿರ್ಧರಣೆ ಮಾಡುವ ಕಾರ್ಯವು ಪ್ರಗತಿಯಲ್ಲಿದೆ ಎಂದರು.
ಕೆ ಎಸ್ ಆರ್ ಎಸ್ ಎ ಸಿ ಸಂಸ್ಥೆರವರಿಂದ ತ್ರೈಮಾಸಿಕವಾಗಿ ಆಯ್ಕೆ ಕ್ಲಸ್ಟರ್ ಕಲ್ಲುಗಣಿ ಗುತ್ತಿಗೆ ಪ್ರದೇಶಗಳನ್ನು ಡ್ರೋಣ್ ಉಪಕರಣದ ಮೂಲಕ ಸಮೀಕ್ಷೆ ನಡೆಸಿ ಕಲ್ಲುಗಣಿ ಗುತ್ತಿಗೆ ಪ್ರದೇಶಗಳಲ್ಲಿ ಗುತ್ತಿಗೆದಾರರು ಉತ್ಪಾದಿಸಿ ಸಾಗಾಣಿಕೆ ಮಾಡಿದ ಉಪ ಖನಿಜದ ಪ್ರಮಾಣಕ್ಕೆ ಅನುಗುಣವಾಗಿ ರಾಜಧನ ಮತ್ತು ಇತರೆ ಅನ್ವಯಿಕ ಶುಲ್ಕಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ ಸಚಿವರು ಸಂಪುಟ ಉಪ ಸಮಿತಿ ಶಿಫಾರಸ್ಸಿನನ್ವಯ ದಿನಾಂಕ:04.12.2024 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಒನ್ ಟೈಂ ಸೆಟ್ಲಮೆಂಟ್ ಪದ್ಧತಿಯನ್ನು ಅನುಷ್ಠಾನಗೊಳಿಸಲು ಕೆಲವು ಶಿಫಾರಸ್ಸಿನೊಂದಿಗೆ ಅನುಮೋದನೆಗೊಂಡಿರುತ್ತದೆ. ಒಟಿಎಸ್ ಪದ್ಧತಿಯನ್ನು ಜಾರಿಗೊಳಿಸಿ ಕಲ್ಲುಗಣಿ ಗುತ್ತಿಗೆದಾರರಿಂದ ಸರ್ಕಾರಕ್ಕೆ ಬರಬೇಕಾದ ರಾಜಧನ ಸೋರಿಕೆಯನ್ನು ಸಂಗ್ರಹಿಸಲು ಕ್ರಮ ವಹಿಸುವ ನಿಟ್ಟಿನಲ್ಲಿ ನಿಯಮ ಹಾಗೂ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿದೆ ಎಂದರು.
ಪ್ರಸ್ತುತ ಒನ್ ಸ್ಟೇಜ್ ಒನ್ ಜಿಪಿಎಸ್ ಕೇಂದ್ರಿಕೃತ ವ್ಯವಸ್ಥೆಯಡಿಯಲ್ಲಿ ಜಿಪಿಎಸ್ ಅಳವಡಿಸಿದ ಖನಿಜ ಸಾಗಾಣಿಕಾ ವಾಹನಗಳ ಮೇಲೆ ನಿಗವಹಿಸಲಾಗುತ್ತಿದೆ. ಜಿಪಿಎಸ್ ಅಳವಡಿಸದೇ ಅನಧಿಕೃತವಾಗಿ ಖನಿಜ ಸಾಗಾಣಿಕಾ ವಾಹನಗಳ ಮೇಲೆ
ನಿಗವಹಿಸಲು ಎಎನ್ ಪಿಆರ್ ಕ್ಯಾಮೆರಗಳನ್ನು ಪ್ರಮುಖ ತನಿಖಾ ಠಾಣೆಗಳಲ್ಲಿ ಮತ್ತು ಕಲ್ಲುಗಣಿ ಗುತ್ತಿಗೆ/ಕ್ರಷರ್ ಗಳ ಕ್ಲಸ್ಟರ್ ಪ್ರದೇಶಗಳಲ್ಲಿ ಅಳವಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಕಾಮಗಾರಿಗಳಲ್ಲಿ ಬಳಕೆ ಮಾಡುವ ಉಪ ಖನಿಜಕ್ಕೆ ಕಡ್ಡಾಯವಾಗಿ ರಾಯಲ್ಟಿ ಡಿಫರ್ಡ್ ಮಿನರಲ್ ಡಿಸ್ಪ್ಯಾಚ್ ಪರ್ಮಿಟ್ ಅನ್ನು ಪಡೆದು ಬಳಕೆ ಮಾಡಲಾದ ಉಪ ಖನಿಜದ ಪ್ರಮಾಣಕ್ಕೆ ಅನುಗುಣವಾಗಿ ರಾಜಧನ, ಹೆಚ್ಚುವರಿ ಪಾವತಿ, ಡಿಎಂಎಫ್ ಮತ್ತು ಇತರೆ ಅನ್ವಯಿಕ ಶುಲ್ಕಗಳನ್ನು ಪಾವತಿಸಿಕೊಳ್ಳಲು ಇಲಾಖೆಯ ತಂತ್ರಾಂಶದಲ್ಲಿ ಸೂಕ್ತ ಬದಲಾವಣೆ ಮಾಡಲಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ರಾಜಧನ ಸೋರಿಕೆ ಮತ್ತು ಇತರೆ ಅನ್ವಯಿಸುವ ತೆರಿಗೆಗಳನ್ನು ಕಡ್ಡಾಯವಾಗಿ ಕಾಮಗಾರಿ ಗುತ್ತಿಗೆದಾರರ ಬಿಲ್ಲುಗಳಿಂದ ಕಟ್ಟಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಸರ್ಕಾರಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಮುಖ್ಯವಾದ ಕೋರಿಕೆಗಳನ್ನು ಸಲ್ಲಿಸಲಾಯಿತು. ಮುಖ್ಯ ಮತ್ತು ಉಪ ಖನಿಜಗಳ ಗಣಿಗಾರಿಕೆ/ ಸಾಗಾಣಿಕೆ ಮೇಲೆ ನಿಗವಹಿಸಲು ಆಯ್ದ ಸ್ಥಳಗಳಲ್ಲಿ ಖನಿಜ ತನಿಖಾ ಠಾಣೆಗಳ ಸ್ಥಾಪನೆ ನಿರ್ವಹಣೆ ಮತ್ತು ಸಿಬ್ಬಂದಿ ನಿಯೋಜನೆ ಹಾಗೂ ಅನಧಿಕೃತ ಗಣಿಗಾರಿಕೆ/ ದಾಸ್ತಾನನ್ನು ಜಪ್ತಿ ಮಾಡಿ ವಿಲೇ ಪಡಿಸಲು ತಗಲುವ ವೆಚ್ಚವನ್ನು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಗೆ ಕಾರ್ಫಸ್ ಫಂಡ್ ಮೂಲಕ ಭರಿಸಲು ಅನುದಾನ ನೀಡುವುವುದು. ಅನಧಿಕೃತ ಗಣಿಗಾರಿಕೆ/ಸಾಗಾಣಿಕೆ/ದಾಸ್ತಾನನ್ನು ನಿಯಂತ್ರಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳನ್ನು ನಿಯೋಜಿಸುವುದು. ಇಲಾಖೆಯಲ್ಲಿ ಖಾಲಿಯಿರುವ ಭೂವಿಜ್ಞಾನಿ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಅಧಿಕಾರಿಗಳು ಸಚಿವರ ಮೂಲಕ ಸರ್ಕಾರಕ್ಕೆ ಕೋರಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.