SUDDIKSHANA KANNADA NEWS/ DAVANAGERE/ DATE:24-08-2024
ಬೆಂಗಳೂರು/ ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯರ ಸ್ವಾಮೀಜಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಆ ನಿರ್ಧಾರಕ್ಕೆ ಬದ್ಧರಿದ್ದೇವೆ ಎಂದು ತಿಪಟೂರು ಸಾಧು ವೀರಶೈವ ಸಮಾಜವು ತಿಳಿಸುವ ಜೊತೆಗೆ ಶ್ರೀಗಳ ಜೊತೆ ನಿಲ್ಲುವುದಾಗಿ ಘೋಷಿಸಿದೆ.
ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲೂಕಿನ ತರಳಬಾಳು ಮಠದ ಶಿಷ್ಯಪ್ರಮುಖರು ಸಿರಿಗೆರೆ ಸಮೀಪದ ಶಾಂತಿವನದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದರ್ಶನಾಶೀರ್ವಾದ ಪಡೆದ ಬಳಿಕ ಮಠದ ಸದ್ಭಕ್ತರು ಈ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದರು. ಈ ವೇಳೆ ಶ್ರೀಗಳ ಆಶೀರ್ವಾದ ಪಡೆದರು.
ಬಂಡವಾಳಶಾಹಿಗಳ ಅಸಭ್ಯ ಅನಾಗರಿಕ ಹೇಳಿಕೆಗಳನ್ನು ಖಂಡಿಸಿದ ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲೂಕಿನ ಭಕ್ತಾದಿಗಳು ಶ್ರೀಗಳು ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಒಳ್ಳೆಯ ಕೆಲಸಗಳು ಮಠ
ವಿರೋಧಿಗಳಿಗೆ ಸರಿಯಾಗಿ ಕಂಡು ಬರುತ್ತಿಲ್ಲ. ಇಲ್ಲಿಯೂ ರಾಜಕೀಯ ಮಾಡಬೇಕೆಂದು ಕೆಲ ಪಟ್ಟಭದ್ರಾ ಹಿತಾಸಕ್ತಿಗಳು ಷಡ್ಯಂತ್ರ ರೂಪಿಸಿದ್ದು, ಇಂಥವರ ಪರ ಯಾರೂ ನಿಲ್ಲಬಾರದು. ಶ್ರೀಗಳು ಉತ್ತರಾಧಿಕಾರಿ, ಮಠದ ಡೀಡ್ ಸೇರಿದಂತೆ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವೆಲ್ಲರೂ ಬೆಂಬಲಿಸುತ್ತೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮದ ಮುಖಂಡರು ಸ್ಪಷ್ಟಪಡಿಸಿದರು.
ತಿಪಟೂರು ತಾಲೂಕು ಹಾಲ್ಕುರಿಕೆಯಲ್ಲಿ ಸಭೆ ಸೇರಿ ಬಂಡವಾಳಶಾಹಿಗಳ ಅಸಭ್ಯ ಅನಾಗರಿಕ ಹೇಳಿಕೆಗಳನ್ನು ಖಂಡಿಸಿ ಕೈಗೊಂಡ ನಿರ್ಣಯವನ್ನು ತೆಗೆದುಕೊಂಡು ಈ ಪತ್ರವನ್ನು ಶ್ರೀಗಳಿಗೆ ನೀಡಿದರು.
ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಸಾಧು ವೀರಶೈವ ಲಿಂಗಾಯತ ಸಮುದಾಯಕ್ಕೆ ಮಾತ್ರವಲ್ಲ, ಎಲ್ಲಾ ಜಾತಿ, ಧರ್ಮದವರ ಅಭ್ಯುದಯಕ್ಕೆ ಶ್ರಮಿಸಿದ್ದಾರೆ, ಶ್ರಮಿಸುತ್ತಲೇ ಇದ್ದಾರೆ. ಎಷ್ಟೋ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ರಾಜ್ಯ ಮಾತ್ರವಲ್ಲ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಠದಲ್ಲಿಯೂ ತಮ್ಮ ಕಾರ್ಯವೈಖರಿಯೊಂದಿಗೆ ಗಮನ ಸೆಳೆದಿದ್ದಾರೆ. ಪ್ರತಿಯೊಬ್ಬರೂ ಶ್ರೀಗಳಿಗೆ ಗೌರವ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಘಟಾನುಘಟಿಗಳು, ಸಾಧು ಸಂತರು, ವಿವಿಧ ಮಠಗಳ ಮಠಾಧೀಶರು ಗೌರವಿಸುತ್ತಾರೆ. ಆದ್ರೆ, ನಮ್ಮ ಸಮಾಜದ ಕೆಲ ಬಂಡವಾಳಶಾಹಿಗಳು ಶ್ರೀಗಳ ವಿರುದ್ಧವೇ ಮಾತನಾಡುತ್ತಿರುವುದು ದುರ್ದೈವದ ಸಂಗತಿ. ಯಾವುದೇ ಷಡ್ಯಂತ್ರ ಮಾಡಿದರೂ ಹೆದರುವ ಪ್ರಶ್ನೆಯೇ ಇಲ್ಲ. ಶ್ರೀಗಳ ಪರ ನಿಂತು ಹೋರಾಡುತ್ತೇವೆ ಎಂಬ ಸಂದೇಶ ನೀಡಿದರು.
ಕೇವಲ ತುಮಕೂರು, ತಿಪಟೂರು, ದಾವಣಗೆರೆ, ಕೊಟ್ಟೂರು, ಸಿರಿಗೆರೆ ಮಾತ್ರವಲ್ಲ, ಎಲ್ಲಾ ಕಡೆಗಳಲ್ಲಿಯೂ ಶ್ರೀಗಳ ಪರ ನಿರ್ಣಯ ಕೈಗೊಂಡು ಭಕ್ತರು ಶ್ರೀಗಳಿಗೆ ಬೆಂಬಲ ಘೋಷಿಸುತ್ತಿದ್ದಾರೆ. ಇದರಿಂದಾಗಿ ಶ್ರೀಗಳಿಗೆ ಆನೆಬಲ ಬಂದಂತಾಗಿದೆ. ಭಕ್ತರು ತೋರುತ್ತಿರುವ ಗೌರವ, ಪ್ರೀತಿ ವರ್ಣಿಸಲು ಅಸಾಧ್ಯ. ಮಠದ ಭಕ್ತರ ಪರವಾಗಿಯೇ ನಾವಿರುವುದು, ಅವರಿಗಾಗಿಯೇ ಇರೋದು ಎನ್ನುತ್ತಾರೆ ಸಿರಿಗೆರೆ ಶ್ರೀಗಳು.