SUDDIKSHANA KANNADA NEWS/ DAVANAGERE/ DATE:17-02-2025
ದಾವಣಗೆರೆ: ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮದಲ್ಲಿ ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೆಚ್ಚೇನಹಳ್ಳಿ ಗ್ರಾಮದ ಆಟೋ ಚಾಲಕ ಬಸವರಾಜ್ (32) ಆತ್ಮಹತ್ಯೆ ಮಾಡಿಕೊಂಡ ಪತಿ. ಕಳೆದ ಕೆಲ ವರ್ಷಗಳ ಹಿಂದೆ ಹರಿಹರ ತಾಲೂಕಿನ ಉಮಾ ಅವರನ್ನು ಬಸವರಾಜ್ ಅವರು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಪುತ್ರಿ ಹಾಗೂ ಒಂದು ವರ್ಷ ಪುತ್ರ ಇದ್ದಾನೆ.
ಮೈಸೂರಿನ ಸುನೀಲ್ ಎಂಬಾತನ ಜೊತೆ ಹೋಗಿದ್ದ ಉಮಾ ಆಗಾಗ್ಗೆ ಜಗಳವಾಡಿಕೊಂಡು ತವರು ಮನೆಗೆ ಹೋಗುತ್ತಿದ್ದರು. ಪತಿ ಜೊತೆ ಜಗಳವಾಡಿಕೊಂಡು ಒಂದು ತಿಂಗಳ ಕಾಲ ತವರು ಮನೆಗೆ ಹೋಗಿದ್ದರು. ಆಗ ಸುನೀಲ್ ಜೊತೆ ಹೋಗಿದ್ದರು. ಈ ಸಂಬಂಧ ಬಸವರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಮೈಸೂರಿನಿಂದ ಪತ್ನಿಯನ್ನು ಕರೆದುಕೊಂಡು ಬರಲಾಗಿತ್ತು.
ಜಗಳೂರಿನಲ್ಲಿ ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಉಮಾ ಕಳೆದ ಎರಡು ದಿನಗಳ ಹಿಂದೆ ಇಬ್ಬರು ಮಕ್ಕಳನ್ನು ಬಿಟ್ಟು ಮತ್ತೆ ಮೈಸೂರಿಗೆ ತೆರಳಿದ್ದಳು. ಇದರಿಂದ ತೀವ್ರ ಮನನೊಂದಿದ್ದ ಬಸವರಾಜ್ ಅವರು ಮಕ್ಕಳನ್ನು ಕರೆದುಕೊಂಡು ಸ್ವಗ್ರಾಮ ಕೆಚ್ಚೇನಹಳ್ಳಿಗೆ ಹೋಗಿದ್ದರು. ಫೆ. 14ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತನ್ನ ಸಾವಿಗೆ ಪತ್ನಿಯ ಅನೈತಿಕ ಸಂಬಂಧವೇ ಕಾರಣ ಎಂದು ಪತಿ ಬಸವರಾಜ್ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ. ಮೃತರ ಪತ್ನಿ ಉಮಾ ಅವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಸುನೀಲ್ ನ ಪತ್ತೆಗೆ ಬಲೆ ಬೀಸಿದ್ದು,
ಆದಷ್ಟು ಬೇಗ ಆತನನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೃತರ ಸಹೋದರ ಈಶ್ವರಗೌಡ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.






