SUDDIKSHANA KANNADA NEWS/ DAVANAGERE/ DATE:27-02-2025
ದಾವಣಗೆರೆ: ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಯಶಸ್ಸು ಸಾಧಿಸಿದರೆ ಭಾರತ ದೇಶವು ಬಲಿಷ್ಠಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯತೆ ಇದೆ ಎಂದು ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಅಭಿಪ್ರಾಯಪಟ್ಟರು.
ಬಾಷಾ ನಗರದ ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆ ಆಶ್ರಯದಲ್ಲಿ ನಡೆದ ಮಿಲ್ಲತ್ ಕನ್ನಡ, ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಸಕರು, ಸಚಿವರು, ಸಂಸದರು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತರೆ ದೇಶ ಬಲಿಷ್ಠಗೊಳ್ಳದು. ಅಧಿಕಾರಿಗಳು ಸಹ ಕಚೇರಿಯೊಳಗೆ ಇದ್ದು ಕಾರ್ಯನಿರ್ವಹಿಸಿದರೆ ಸಾಲದು. ಈಗಿನ ಮಕ್ಕಳ ವಿದ್ಯಾಭ್ಯಾಸ ಉತ್ಕೃಷ್ಟ ಗುಣಮಟ್ಟದ್ದಾದರೆ, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಉನ್ನತ ಸಾಧನೆ ಮಾಡಿದಾಗ ಮಾತ್ರ ಭಾರತ ವಿಶ್ವಭೂಪಟದಲ್ಲಿ ಗುರುತಿಸುವಂತಾಗಲು ಸಾಧ್ಯ ಆಗುತ್ತದೆ ಎಂದು ತಿಳಿಸಿದರು.
ಮೈಕ್ ಮುಂದೆ ನಿಂತು ಮಾತನಾಡುವುದು, ಯಾರಿಗೋ ಅವಹೇಳನ ಮಾಡುವುದು ದೇಶ ಪ್ರೇಮ ಅಲ್ಲ. ಅದು ಸಮುದಾಯದ ಪ್ರೇಮವೂ ಅಲ್ಲ. ಸೈಯ್ಯದ್ ಸೈಫುಲ್ಲಅವರು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭ ಮಾಡಿ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವುದು ನಿಜವಾದ ದೇಶ ಪ್ರೇಮ ಎಂದು ಬಣ್ಣಿಸಿದರು.
ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ನೀಡಿ. ಬಡತನ, ಹಣ ಇಲ್ಲ ಎಂಬ ಕಾರಣಕ್ಕೆ ಶಾಲೆಯಿಂದ ಬಿಡಿಸಬೇಡಿ. ಬಡತನದಲ್ಲಿ ಹುಟ್ಟಿದವರು ಬಡತನದಲ್ಲಿಯೇ ಸಾಯಬೇಕೆಂದೆನಿಲ್ಲ. ಸಾಧನೆ ಮಾಡಿ ನೀವೂ ಶ್ರೀಮಂತರಾಗಬಹುದು. ಇದಕ್ಕೆ ಕಠಿಣ ಓದು, ಉತ್ತಮ ಶಿಕ್ಷಣ ಪಡೆದರೆ ಸಾಧನೆ ಕಷ್ಟವಾಗದು. ಸ್ವಾಭಿಮಾನದ ಜೀವನ ಸಾಗಿಸಬೇಕಾದರೆ ಶಿಕ್ಷಣ ಬೇಕೇ ಬೇಕು. ಮನೆಯಲ್ಲಿನ ಕಷ್ಟ ನಿಮ್ಮ ಓದಿಗೆ ಅಡ್ಡಿಯಾಗಬಾರದು. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ, ಓದಿನತ್ತ ಹೆಚ್ಚಿನ ಗಮನ ಹರಿಸಿ ಎಂದು ಸಲಹೆ ನೀಡಿದರು.
ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಪ್ರಕಾಶಿಸುತ್ತಿದ್ದರೆ, ಭವಿಷ್ಯದಲ್ಲಿ ಮನೆಗೆ ಬೆಳಕಾಗುತ್ತಾರೆ. ಪೋಷಕರ ಕಷ್ಟಗಳನ್ನು ಪರಿಹರಿಸುತ್ತಾರೆ. ಮದುವೆ, ಗೃಹಪ್ರವೇಶದಂಥ ಸಮಾರಂಭಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಮಾತ್ರ ಪ್ರತಿಯೊಬ್ಬರ ಜೀವನ ಹಸನಾಗಲು ಸಾಧ್ಯ ಎಂದು ತಿಳಿಸಿದರು.
ನಾನು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಓದಿದ್ದೇನೆ. ಐದು ಬಾರಿ ಶಾಸಕನಾಗಿದ್ದೇನೆ. ಸಚಿವನಾಗಿಯೂ ಕೆಲಸ ನಿರ್ವಹಿಸಿದ್ದೇನೆ. ಈಗ ಸಭಾಪತಿ ಆಗಿದ್ದೇನೆ. ನನ್ನನ್ನು ಮೊದಲಿನಿಂದಲೂ ಸೈಯದ್ ಸೈಫುಲ್ಲಾ ಅವರು ಪ್ರೀತಿಯಿಂದ ಕಾಣುತ್ತಿದ್ದಾರೆ. ನನಗೂ ಅವರ ಬಗ್ಗೆ ವಿಶೇಷ ಗೌರವ, ಆತ್ಮೀಯತೆ ಇದೆ. ನನ್ನನ್ನು ಇಲ್ಲಿಗೆ ಕರೆಯಿಸಿ ನಿಮಗೆಲ್ಲಾ ಪ್ರೇರಣೆಯಾಗಿದ್ದಾರೆ. ಭವಿಷ್ಯದಲ್ಲಿ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಉನ್ನತ ಸ್ಥಾನಕ್ಕೇರಲಿ. ಈ ಶಾಲೆ, ಪೋಷಕರು, ಶಿಕ್ಷಕರು, ದಾವಣಗೆರೆ ಕೀರ್ತಿ ಪತಾಕೆ ಹಾರಿಸುವಂಥ ಸಾಧನೆ ಮಾಡಿ ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸೈಯದ್ ಸೈಫುಲ್ಲಾ ಅವರು, ಸ್ಪೀಕರ್ ಸ್ಥಾನದಲ್ಲಿದ್ದರೂ ಅಹಂ ಇಲ್ಲದೇ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಯು. ಟಿ. ಖಾದರ್ ಅವರ ವಿನಯತೆ, ಸರಳತೆ ಖುಷಿ ಕೊಟ್ಟಿದೆ. ವಿದ್ಯಾರ್ಥಿಗಳು ಓದಿನ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಶಿಕ್ಷಕರು ಹೇಳಿಕೊಟ್ಟ ಪಾಠ ಸರಿಯಾಗಿ ಆಲಿಸಿ, ಮನೆಯಲ್ಲಿ ಮನನ ಮಾಡಿದರೆ ಭವಿಷ್ಯದಲ್ಲಿ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಾಸಕ ಕೆ. ಎಸ್. ಬಸವಂತಪ್ಪ, ಕಾಂಗ್ರೆಸ್ ಮುಖಂಡ ಕೆ. ಚಮನ್ ಸಾಬ್, ಅಯೂಬ್ ಪೈಲ್ವಾನ್, ನಸೀರ್ ಅಹ್ಮದ್, ಮನ್ಸೂರ್ ಅಲಿ, ಶಾಲೆಯ ಆಡಳಿತಾಧಿಕಾರಿ ಸೈಯದ್ ಅಲಿ, ಸಂಸ್ಥೆಯ ಶಿಕ್ಷಣ ಸಂಯೋಜಕ ಸಿದ್ಧಪ್ಪ ಸೇರಿದಂತೆ ಹಲವರು ಹಾಜರಿದ್ದರು.