SUDDIKSHANA KANNADA NEWS/ DAVANAGERE/ DATE:07-03-2025
ಬೆಂಗಳೂರು: ರಾಜ್ಯದಲ್ಲಿ ಒತ್ತುವರಿಯಾಗಿರುವ 328 ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸಲು ಒತ್ತುವರಿಯನ್ನು ತೆರವುಗೊಳಿಸಲಾಗುವುದು. ʻಭೂ-ವರಾಹʼ ಯೋಜನೆಯಡಿಯಲ್ಲಿ ಈ ದೇವಾಲಯಗಳ ಸ್ಥಿರಾಸ್ತಿಗಳನ್ನು ದಾಖಲೀಕರಣಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
2025-26ನೇ ಸಾಲಿನ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 25,551 ಧಾರ್ಮಿಕ ಸಂಸ್ಥೆಗಳ/ ದೇವಾಲಯಗಳಲ್ಲಿರುವ ಅರ್ಚಕರಿಗೆ ಪ್ರಸ್ತುತ ಪಾವತಿಸುತ್ತಿರುವ ವಾರ್ಷಿಕ ತಸ್ತೀಕ್ ಮೊತ್ತವನ್ನು 60,000 ರೂ.ಗಳಿಂದ 72,000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತಿತರ ಭತ್ಯೆಗಳನ್ನು ಇದುವರೆವಿಗೂ ದೇವಾಲಯಗಳ ನಿಧಿಯಿಂದ ಭರಿಸಲಾಗುತ್ತಿತ್ತು. 2025-26 ನೇ ಸಾಲಿನಿಂದ ಇವರುಗಳ ವೇತನವನ್ನು ಸರ್ಕಾರದ ವತಿಯಿಂದ ಪಾವತಿಸಲು ಕ್ರಮವಹಿಸಲಾಗುವುದು.
ರಾಜ್ಯದ ಪ್ರಮುಖ 400 ದೇವಾಲಯ ಹಾಗೂ ಹೊರ ರಾಜ್ಯಗಳಲ್ಲಿರುವ ರಾಜ್ಯ ಛತ್ರಗಳಲ್ಲಿ ಲಭ್ಯವಿರುವ ಅಂದಾಜು 3,500 ಕೊಠಡಿಗಳಲ್ಲಿ ಯಾತ್ರಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮತ್ತು ಕೊಠಡಿಗಳ ಕಾಯ್ದಿರಿಸುವಿಕೆ ಹಾಗೂ ನಿರ್ವಹಣೆ ಮಾಡಲು ʻಕರ್ನಾಟಕ ದೇವಾಲಯಗಳ ವಸತಿ ಕೋಶʼವನ್ನು ಸ್ಥಾಪಿಸಲಾಗುವುದು.
ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮವನ್ನು ಧಾರ್ಮಿಕ ಹಾಗೂ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು.