SUDDIKSHANA KANNADA NEWS/ DAVANAGERE/ DATE:01-02-2025
ದಾವಣಗೆರೆ: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2025-26 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ. ಇದೊಂದು ನಿರಾಶದಾಯಕ ಬಜೆಟ್ ಎಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಸಂಸದರು,ಅತೀ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಮತ್ತೆ ಅನ್ಯಾಯ ಮಾಡಲಾಗಿದೆ ಹಾಗೂ ಮಲತಾಯಿ ಧೋರಣೆ ಅನುಸರಿಸಲಾಗಿದೆ.ಆದರೆ ಬಿಹಾರ ರಾಜ್ಯಕ್ಕೆ ಮಾತ್ರ ಕೊಡುಗೆಗಳ ಮಹಾಪೂರವೇ ಹರಿಸಲಾಗಿದೆ ಎಂದಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ೨೮ ಅಂಶಗಳಿರುವ ಬೇಡಿಕೆ ಸಲ್ಲಿಸಲಾಗಿತ್ತು ಹಾಗೂ ಈ ಬಾರಿ ಸಾಕಷ್ಟು ನಿರೀಕ್ಷೆ ಇತ್ತು ಆದರೆ ಕೇಂದ್ರ ಸರ್ಕಾರದ 4 ಎಂಜಿನ್ ಗಳು ಹಳಿಬಿಟ್ಟು ಹೋಗಿವೆ ಎಂದರು. ನಬಾರ್ಡ್ ನಲ್ಲಿರುವ ಆಗಿರುವ ಅನುದಾನದ ಕೊರತೆ ಅಥವಾ ಆರೋಗ್ಯ ಕ್ಷೇತ್ರಕ್ಕೆ ಬರಬೇಕಾದ ಅನುದಾನದ ಬಗ್ಗೆಯೂ ರಾಜ್ಯ ಸರ್ಕಾರದಿಂದ ಮನವಿ ಮಾಡಲಾಗಿತ್ತು. ನಮ್ಮ ಯಾವ ಬೇಡಿಕೆಯೂ ಈಡೇರಿಕೆಯಾಗಿಲ್ಲ ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ತನ್ನ ಪಾಲಿನ ತೆರಿಗೆ ಪಾವತಿ ಮಾಡುತ್ತಾ ಬಂದಿದೆ ಆದರೆ ಕೇಂದ್ರ ಸರ್ಕಾರ ನಮಗೆ ಯಾವ ಕೊಡುಗೆ ನೀಡಿಲ್ಲ. ಅಪ್ಪರ್ ಭದ್ರಾ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ,ಬೆಂಗಳೂರು ಅಭಿವೃದ್ಧಿ,ನೀರಾವರಿ ಯೋಜನೆಯ ಯಾವ ಬೇಡಿಕೆಯೂ ಈಡೇರಿಕೆಯಾಗಿಲ್ಲ. ರಾಷ್ಟ್ರೀಯ ವಿಪತ್ತು ನಿಧಿ ಹಾಗೂ ಡಿಆರ್ ಎಫ್ ನಿಧಿಗಳಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಡ ಹಾಗೂ ಮಧ್ಯಮವರ್ಗದವರಿಗೆ ಡಯಾಲಿಸಿಸ್ ಸೆಂಟರ್ ನೀಡಿಲ್ಲ. ದಾವಣಗೆರೆಯಲ್ಲಿ ನಮ್ಮ ಎಸ್ ಎಸ್ ಕೇರ್ ಟ್ರಸ್ಟ್ ಮೂಲಕ ಪ್ರತಿ ತಿಂಗಳು ಸುಮಾರು 500-600 ಡಯಾಲಿಸಿಸ್ ಗಳನ್ನು
ನಾವು ಉಚಿತವಾಗಿ ಮಾಡುತ್ತಿದ್ದೇವೆ.ಪಿಎಂ ಪರಿಹಾರ ನಿಧಿಯ ಮೊತ್ತ ಹೆಚ್ಚಳಮಾಡಿಲ್ಲ. ವೈದ್ಯಕೀಯ ಸೀಟ್ ಹಾಗೂ ಕಾಲೇಜು ಹೆಚ್ಚಳ ಮಾಡಿದ್ದಾರೆ ಆದರೆ ಅದಕ್ಕೆ ತಕ್ಕಂತೆ ವೈದ್ಯರು ಹಾಗೂ ಸೌಲಭ್ಯಗಳ ಕೊರತೆ ನೀಗಿಸಿಲ್ಲ ಎಂದು
ಆರೋಪಿಸಿದ್ದಾರೆ.
ಅಂಗನವಾಡಿ,ಆಶಾ ಕಾರ್ಯಕರ್ತರು ಹಾಗೂ ಸಹಾಯಕಿಯರ ಅನುದಾನ ಹೆಚ್ಚಳಮಾಡಿಲ್ಲ ಇದರಿಂದ ರಾಜ್ಯದ ಮೇಲೆಯೇ ಎಲ್ಲಾ ಹೊರೆ ಏರಿಕೆಯಾಗಲಿದೆ.ಶೇ 50 ರಷ್ಟು ಅನುದಾನ ಕೇಂದ್ರ ಸರ್ಕಾರ ನೀಡಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಉಳಿದಂತೆ ಶಿವಮೊಗ್ಗ ಮರಿಯಮ್ಮನಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಿಲ್ಲ. ಹರಿಹರ ಹೊನ್ನಾಳಿ,ಶಿವಮೊಗ್ಗ ರೈಲ್ವೆ ಯೋಜನೆ ಬಗ್ಗೆ ಪ್ರಸ್ತಾಪವಿಲ್ಲ ಎಂದು ಕಿಡಿಕಾರಿದ್ದಾರೆ.
ಜಿಲ್ಲೆಗೊಂದು ವಿಮಾನ ನಿಲ್ದಾಣ ಕಲ್ಪಿಸಿದ್ದರೆ ಬೆಂಗಳೂರಿನಂತಹ ಮೆಟ್ರೋಪಾಲಿಟಿನ್ ಸಿಟಿಗಳಿಗೆ ಒತ್ತಡ ಕಡಿಮೆಯಾಗುತ್ತಿತ್ತು ಅಲ್ಲದೇ ಉದ್ಯೋಗಾವಕಾಶಗಳು ಸಹ ಲಭ್ಯವಾಗುತ್ತಿತ್ತು ಈ ಬಗ್ಗೆ ಬಜೆಟ್ ನಲ್ಲಿ ಗಮನ ಹರಿಸಿಲ್ಲ. ಒಟ್ಟಾರೆ ಆರ್ಥಿಕ ಭದ್ರತೆಯ ಬಗ್ಗೆ ಸ್ಪಷ್ಟತೆ ಇಲ್ಲದ ಬಜೆಟ್ ಇದಾಗಿದೆ ಎಂದಿದ್ದಾರೆ.