SUDDIKSHANA KANNADA NEWS/ DAVANAGERE/ DATE:07-03-2025
ದಾವಣಗೆರೆ: ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಂಡಿಸಿದ 2025-26 ನೇ ಸಾಲಿನ ಬಜೆಟ್ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.
ರಾಜ್ಯ ಬಜೆಟ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಂಸದರು ದಾವಣಗೆರೆ ಜಿಲ್ಲಾ ಆಸ್ಪತ್ರೆ ಸೇರಿದಂತೆ ಇತರೆ ಜಿಲ್ಲೆಗಳ ಒಟ್ಟು 08 ತಾಲ್ಲೂಕು ಆಸ್ಪತ್ರೆಗಳನ್ನು 650 ಕೋಟಿ ರೂ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ಇದು ಉತ್ತಮವಾಗಿದೆ. ಬಂಜಾರ ಸಮುದಾಯದ ಪ್ರಮುಖ ಧಾರ್ಮಿಕ ಸ್ಥಳವಾದ ದಾವಣಗೆರೆ ಜಿಲ್ಲೆಯ ಸಂತ ಸೇವಾಲಾಲ್ ಪುಣ್ಯಕ್ಷೇತ್ರವಾದ ಸೂರಗೊಂಡನ ಕೊಪ್ಪದಲ್ಲಿ ಒಂದು ವಸತಿ ಶಾಲೆಯನ್ನು ಕೈಸ್ ವತಿಯಿಂದ ಪ್ರಾರಂಭಿಸಲಾಗುತ್ತಿದೆ ಹಾಗೂ ದಾವಣಗೆರೆಯ ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ಸ್ಥಾಪಿಸಲಾಗಿರುವ ವೃತ್ತಿರಂಗಭೂಮಿ ರಂಗಾಯಣದಲ್ಲಿ 3.00 ಕೋಟಿ ರೂ ವೆಚ್ಚದಲ್ಲಿ ಮೂಲಭೂತ ಸೌಕರ್ಯ, ವೃತ್ತಿ ‘ರಂಗಾಯಣ ಸಮುಚ್ಛಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಾಣ,ಜಗಳೂರು ಕೆರೆ ತುಂಬಿಸುವ ಯೋಜನೆ,ಹೊನ್ನಾಳಿಯ ಬೆನಕನಹಳ್ಳಿ ಗೋವಿನ ಕೋವಿ ಮತ್ತು ಹನುಮಸಾಗರ ಕೆರೆ ತುಂಬಿಸುವ ಯೋಜನೆ ಹಾಗೂ ರಾಜ್ಯ ಸರ್ಕಾರವು ರೈಲ್ವೆ ಸಹಯೋಗದೊಂದಿಗೆ ತುಮಕೂರು-ದಾವಣಗೆರೆ ಸೇರಿದಂತೆ 9 ವಿವಿಧ ರೈಲ್ವೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ 6 ನೇ ತರಗತಿಯಿಂದ 12ನೇ ತರಗತಿಯವರೆಗಿನ ವಸತಿ ಶಾಲೆಗಳ ನಿರ್ಮಾಣ ಹೀಗೆ ಎಲ್ಲಾ ವಲಯಕ್ಕೂ ಈ ಬಜೆಟ್ ಪೂರಕವಾಗಿದೆ ಎಂದಿದ್ದಾರೆ.