SUDDIKSHANA KANNADA NEWS/ DAVANAGERE/ DATE:29-11-2024
ನವದೆಹಲಿ: ಹಾಸನದಲ್ಲಿ ಡಿಸೆಂಬರ್ 5ರಂದು ಕಾಂಗ್ರೆಸ್ ಪಕ್ಷ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಆಶ್ರಯದಲ್ಲಿ ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗಿದೆ.
ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನೂ ಸಂಘಟಕರು ಆಹ್ವಾನಿಸಿದ್ದಾರೆ.
ಸಮಾವೇಶ ಕುರಿತಂತೆ ಹೈಕಮಾಂಡ್ ಗೆ ಅನಾಮಧೇಯ ಪತ್ರ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರೂ ಅವರೂ ಈ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಸ್ಪಷ್ಪಪಡಿಸಿದ್ದಾರೆ.
ಸಂಪುಟ ಪುನರ್ ರಚನೆ ಕಲ್ಪಿತ ಸುದ್ದಿ:
ಮಾಧ್ಯಮಗಳು ಸಂಪುಟ ಪುನರ್ ರಚನೆಯ ಬಗ್ಗೆ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಸಂಭವನೀಯ ಸಚಿವರ ಪಟ್ಟಿಯನ್ನೂ ಪ್ರಕಟಿಸುತ್ತಿವೆ. ಹೀಗಾಗಿ ಪುನರ್ರಚನೆ, ವಿಸ್ತರಣೆ ಕುರಿತಾದ ಪ್ರಶ್ನೆಗಳಿಗೆ ಮಾಧ್ಯಮಗಳೇ ಉತ್ತರಿಸಬೇಕು ಎಂದು ಹೇಳಿದರು.
ಸಂಪುಟ ಪುನಾರಚನೆ, ವಿಸ್ತರಣೆ ಕುರಿತಂತೆ ನಾನು ರಾಹುಲ್ ಗಾಂಧಿಯವರು ಅಥವಾ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ಮಾಡಿಲ್ಲ. ನಾಗೇಂದ್ರ ಅವರು ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ. ಆದರೆ ಈಗಲೇ ಅಲ್ಲ ಎಂದು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.