SUDDIKSHANA KANNADA NEWS/ DAVANAGERE/ DATE:18-08-2024
ದಾವಣಗೆರೆ: ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರ ಜೀವನಾಡಿ ಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರು ಡ್ಯಾಂಗೆ ಬಾಗೀನ ಅರ್ಪಿಸಿದರು.
ದಾವಣಗೆರೆಯಿಂದ ತೆರಳಿದ ಸಚಿವರು, ಸಂಸದರು, ಶಾಸಕರ ಜೊತೆ ಸಾವಿರಾರು ಜನರು ಭದ್ರಾ ಜಲಾಶಯಕ್ಕೆ ಬಾಗೀನ ಅರ್ಪಿಸಿದರು. ಈ ವೇಳೆ ಮಾತನಾಡಿದ ಸಚಿವ ಮಲ್ಲಿಕಾರ್ಜುನ್ ಅವರು, ಭದ್ರಾ ಜಲಾಶಯವು ಭರ್ತಿಯಾಗಿದ್ದು
ಜಿಲ್ಲೆಯ ರೈತರು ಹಾಗೂ ಜನರ ಸಂತಸಕ್ಕೆ ಕಾರಣವಾಗಿದೆ. ಕಳೆದ ವರ್ಷ ಡ್ಯಾಂ ಭರ್ತಿಯಾಗಿರಲಿಲ್ಲ. ಈ ವರ್ಷ ಜುಲೈ ಅಂತ್ಯಕ್ಕೆ ತುಂಬಿರುವುದು ಎಲ್ಲರಿಗೂ ಸಂತಸ ತಂದಿದೆ. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಡ್ಯಾಂ
ಭರ್ತಿಯಾಗಿರುವುದರಿಂದ ಎರಡು ಬೆಳೆಗಳಿಗೆ ನೀರು ಸಿಗಲಿದೆ ಎಂದು ಹೇಳಿದರು.
ಭದ್ರಾ ಡ್ಯಾಂ ನಂಬಿ ದಾವಣಗೆರೆ ಜಿಲ್ಲೆಯ ರೈತರು ಬೆಳೆ ಬೆಳೆಯುತ್ತಾರೆ. ಡ್ಯಾಂನಲ್ಲಿ ಹೆಚ್ಚು ನೀರು ಸಂಗ್ರಹವಾಗಿದ್ದು, ನೀರನ್ನು ಹೊರಗಡೆ ಬಿಡಲಾಗುತ್ತಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಪ್ರತಿವರ್ಷವೂ ಇದೇ ರೀತಿ ಡ್ಯಾಂ ತುಂಬುತ್ತಿರಲಿ
ಎಂದು ಆಶಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ, ಭದ್ರಾ ಜಲಾಶಯಕ್ಕೆ ಸಚಿವರು, ಶಾಸಕರು ಸೇರಿದಂತೆ ಎಲ್ಲರೂ ಬಾಗೀನ ಅರ್ಪಿಸಿದ್ದೇವೆ. ಭದ್ರಾ ಜಲಾಶಯ ತುಂಬಿರುವುದು ಸಂತಸಕ್ಕೆ ಕಾರಣವಾಗಿದೆ. ಪ್ರತಿವರ್ಷವೂ ಮಳೆಯಾಗಲಿ.
ಜಲಾಶಯ ಭರ್ತಿಯಾಗಲಿ. ರೈತರ ಬದುಕು ಹಸನಾಗಲಿ ಎಂದು ಹೇಳಿದರು.
ಮಾಯಕೊಂಡ ಶಾಸಕ ಕೆ. ಎಸ್. ಬಸವಂತಪ್ಪ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಹೊನ್ನಾಳಿ ಶಾಸಕ ಶಾಂತನಗೌಡ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ರಾಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಸಮರ್ಥ್ ಶಾಮನೂರು, ಜೇಷ್ಠ, ಮಹಾನಗರ ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್ ಮತ್ತಿತರರು ಹಾಜರಿದ್ದರು. ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಸಿಇಒ, ಭದ್ರಾ ಜಲಾಶಯದ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.