SUDDIKSHANA KANNADA NEWS/ DAVANAGERE/ DATE:27-03-2025
ದಾವಣಗೆರೆ/ ಬೆಂಗಳೂರು: ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ಹೈಟೆಕ್ ಸ್ಪರ್ಶ ನೀಡಿ, ಆಸ್ಪತ್ರೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಗೆ ಸಹಕಾರ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಆರೋಗ್ಯ ಸಚಿವರಿಗೆ ಮನವಿ ಮಾಡಿದ ಸಚಿವರು, ದಾವಣಗೆರೆ ಜಿಲ್ಲೆಯಲ್ಲಿನ ಆಸ್ಪತ್ರೆಗಳಲ್ಲಿನ ಕೊರತೆಗಳನ್ನು ನಿವಾರಣೆ ಮಾಡಲು ಸಹಕಾರ ನೀಡುವಂತೆ ಕೋರಿದರು.
ಪ್ರಸ್ತುತ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿನ ಸ್ಥಿತಿಗತಿಗಳನ್ನು ಎಳೆ ಎಳೆಯಾಗಿ ಸಚಿವರು ಬಿಚ್ಚಿಟ್ಟರು. ಜಿಲ್ಲಾಸ್ಪತ್ರೆಯ ಮೇಲ್ಚಾವಣಿಯು ಬೀಳುವ ಹಂತದಲ್ಲಿದೆ. ಎಷ್ಟೇ ರಿಪೇರಿ ಕಾರ್ಯ ನಡೆಸಿದರು ಒಂದಲ್ಲ ಒಂದು ಕಡೆ ಸಮಸ್ಯೆ ಉಂಟಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ತೀವ್ರ ತೊಂದರೆಗಳು ಉಂಟಾಗುತ್ತಿವೆ. ಈ ಹಿನ್ನೆಲೆ ಜಿಲ್ಲಾಸ್ಪತ್ರೆಯನ್ನು ನವೀನ ಮಾದರಿಯಲ್ಲಿ ಹೈಟೆಕ್ ಸ್ಪರ್ಶದೊಂದಿಗೆ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಬೇಕು. ವಿಶೇಷ ಅನುದಾನವನ್ನು ಬಿಡುಗಡೆ ಮಾಡುವುದರ ಮೂಲಕ ಜಿಲ್ಲೆಯಲ್ಲಿನ ಸಾರ್ವಜನಿಕರ ಆರೋಗ್ಯ ಕಾಪಾಡಲು ಸಹಕರಿಸುವಂತೆ ಕೋರಿದರು.
ಅಲ್ಲದೇ ದಾವಣಗೆರೆ ಪಾಲಿಕೆ ವ್ಯಾಪ್ತಿಗೆ ಒಳಪಡುವ ಹಳೇ ಭಾಗದಲ್ಲಿನ ಹೆರಿಗೆ ಆಸ್ಪತ್ರೆಯಲ್ಲಿಯು ಅನೇಕ ಸಮಸ್ಯೆಗಳಿಗೆ ಎಂದ ಸಚಿವರು ಕಿರಿದಾದ ಹಾಗೂ ಸ್ಥಳವಾಕಾಶ ಇಲ್ಲದ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಗಳಿವೆ, ವೈದ್ಯರು ಸಿಬ್ಬಂದಿಗಳ ಸಮಸ್ಯೆಗಳು ಹೆಚ್ಚಾಗಿವೆ. 130 ಹಾಸಿಗೆಗಳ ಸಾಮರ್ಥವಿರುವ ಇಲ್ಲಿನ ಆಸ್ಪತ್ರೆಯ ಸಮೀಪ ಮೂರು ಎಕರೆ ಜಮೀನು ಪಡೆದು 700 ರಿಂದ 800 ಸಾಮಾರ್ಥ್ಯದ ಹಾಸಿಗೆಯೊಂದಿಗೆ ನೂತನವಾದ ಮಹಿಳೆಯರ ಹಾಗೂ ಮಕ್ಕಳ ಆಸ್ಪತ್ರೆ ನಿರ್ಮಿಸಿದರೇ ಅನೇಕರಿಗೆ ಅನುಕೂಲವಾಗುವುದು ಎಂದು ಕೋರಿದ ಸಚಿವರು ಜಿಲ್ಲಾಡಳಿತದ ವ್ಯಾಪ್ತಿಗೆ ಬರುವ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೂ ಹೈಟೆಕ್ ಸ್ಪರ್ಶ ನೀಡುವಂತಹ ಯೋಜನೆಗಳನ್ನು ರೂಪಿಸುವಂತೆ ಆರೋಗ್ಯ ಸಚಿವರಿಗೆ ಬೇಡಿಕೆಯನ್ನಿಟ್ಟರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.