SUDDIKSHANA KANNADA NEWS/ DAVANAGERE/ DATE:27-02-2025
ದಾವಣಗೆರೆ: ಪರೀಕ್ಷೆ ನಡೆಸುವುದು ಒಂದು ಪವಿತ್ರ ಕೆಲಸವಾಗಿದ್ದು, ಯಾವುದೇ ರೀತಿಯ ಅಕ್ರಮಕ್ಕೆ ಎಡೆ ಮಾಡದಂತೆ ಶಾಂತಿಯುತವಾಗಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.
ಜೀವನದಲ್ಲಿ ಎಲ್ಲರಿಗೂ ಶಿಕ್ಷಣ ಅತಿ ಮುಖ್ಯ. ಪೋಷಕರು ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಏರಬೇಕಾದರೆ ಶಿಕ್ಷಣ ಮಾನದಂಡವಾಗಿರುತ್ತದೆ. ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸುವ ಆಲೋಚನೆಯನ್ನು ತೆಗೆದು ಹಾಕಬೇಕು. ಮಕ್ಕಳಿಗೆ ಸದಾ ಪ್ರೋತ್ಸಾಹಿಸುತ್ತಾ ಅವರ ಸಾಧನೆಗೆ ಬೆನ್ನು ತಟ್ಟಬೇಕು ಎಂದರು.
ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಫಲಿತಾಂಶ ಪಡೆಯುವಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಸವಾಲಿನ ಸಮಯ ಇದಾಗಿರುತ್ತದೆ. ಪರೀಕ್ಷಾ ಕೊಠಡಿಯಲ್ಲಿ ಯಾವುದೇ ಅವಘಾಡವಾಗದಂತೆ ನೋಡಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನೂ 28 ದಿನ ಬಾಕಿ ಇದೆ. ಮಾರ್ಚ್ 21 ರಿಂದ ಏಪ್ರಿಲ್ 4 ಪರೀಕ್ಷೆಗಳು ನಡೆಯಲಿವೆ. ಈ ಬಾರಿ ಕಟ್ಟನಿಟ್ಟಾಗಿ ಪರೀಕ್ಷೆ ನಡೆಯಲಿದ್ದು, ಕಾಪಿ ಮಾಡಲು ಯಾವುದೇ ರೀತಿಯ ಅವಕಾಶ ಇರುವುದಿಲ್ಲ. ವಿದ್ಯಾರ್ಥಿಗಳು ಪರಿಶ್ರಮದಿಂದ ಪರೀಕ್ಷೆಯನ್ನು ಎದುರಿಸಲು ಸಿದ್ದರಾಗಬೇಕು. ಅಂಕಗಳ ಬೆನ್ನತ್ತುವುದರೊಂದಿಗೆ ಕ್ರಿಯಾಶೀಲತೆ ಕಳೆದುಕೊಳ್ಳುವುದು ಬೇಡ, ಪರ್ಯಾಯ ಮಾರ್ಗದಲ್ಲಿ ಪರೀಕ್ಷೆ ಪಾಸು ಮಾಡಲು ಹೋದರೆ ಜೀವನದಲ್ಲಿ ಫೇಲ್ ಆಗುತ್ತೀರಿ, ಆತ್ಮಸ್ಥೆರ್ಯದಿಂದ ಮಕ್ಕಳು ಪರೀಕ್ಷೆ ಬರೆಯುವಂತೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಕಿವಿಮಾತು ಹೇಳಿದರು.