SUDDIKSHANA KANNADA NEWS/ DAVANAGERE/ DATE:03-04-2025
ದಾವಣಗೆರೆ: ತಿರಪತಿ ತಿರುಮಲ ವೆಂಕಟೇಶ್ವರನಿಗೆ ಕೋಟ್ಯಂತರ ಭಕ್ತರಿದ್ದಾರೆ. ಅಲ್ಲಿಗೆ ಹೋಗಿ ದರ್ಶನ ಪಡೆಯಲು ಹೋಗುತ್ತಾರೆ. ಆದ್ರೆ, ತಿರುಪತಿ ಮಾದರಿಯಲ್ಲೇ ವೈಭವದ ಬ್ರಹ್ಮರಥೋತ್ಸವವು ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ನಡೆಯಲಿದ್ದು, ಇದಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿಯು ವೈಭವೋಪೇತವಾಗಿ ಈ ಬ್ರಹ್ಮರಥೋತ್ಸವ ಆಯೋಜನೆ ಮಾಡಿದ್ದು, ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ಈ ಬ್ರಹ್ಮರಥೋತ್ಸವ ಕಣ್ತುಂಬಿಕೊಳ್ಳುವುದೇ ಚೆಂದ.
ಈ ಬ್ರಹ್ಮರಥೋತ್ಸವದಂದು ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಮತ್ತು ಪುಷ್ಪಾಲಂಕಾರ ಸೊಬಗು ಕಣ್ಮನ ಸೆಳೆಯುತ್ತದೆ. ದಾವಣಗೆರೆ ತಾಲ್ಲೂಕು ಗೊಲ್ಲರಹಳ್ಳಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ರಾಮನವಮಿ ಅಂಗವಾಗಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ಏಪ್ರಿಲ್ 6ರಂದು ವೈಭವದಿಂದ ಜರುಗಲಿದೆ. ತಿರುಮಲ ತಿರುಪತಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಅಪಾರ ಅವತಾರವಾದ ಪ್ರತಿರೂಪವೇನೋ ಎಂಬಂತೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಗೊಲ್ಲರಹಳ್ಳಿಯ ಪುಣ್ಯಭೂಮಿಯಲ್ಲಿ ನೆಲೆಸಿದ್ದಾರೆ. ಶ್ರೀ ಸ್ವಾಮಿಯ ಕೃಪಾಶೀರ್ವಾದದಿಂದ ಸರ್ವ ಭಕ್ತರ ಇಷ್ಟಾರ್ಥಗಳು ಸಿದ್ದಿಸುತ್ತಿದ್ದು, ಸ್ವಾಮಿಯ ಕೃಪಾಶೀರ್ವಾದ ಬಯಸಿ ಬರುವ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ.
ಏಪ್ರಿಲ್ 6ರ ಭಾನುವಾರ ಸಂಜೆ 4 ಗಂಟೆಗೆ ಸರಿಯಾಗಿ ಅಮೃತ ಘಳಿಗೆಯಲ್ಲಿ ರಥೋತ್ಸವ ನೆರವೇರಲಿದೆ. ನಮ್ಮ ಪುಣ್ಯಭೂಮಿಯ ಕಣ-ಕಣದಲ್ಲಿಯೂ ಪ್ರತ್ಯಕ್ಷ ದೈವ ಸಾಕ್ಷಾತ್ಕಾರವನ್ನು ಕಾಣುವಂತಹ ಸಂಸ್ಕಾರಯುತ ಸಂಸ್ಕೃತಿ ನಮ್ಮ ನಾಡಿನ ಭಕ್ತ ಜನತೆಯ ಹಿರಿಮೆ ನೂರಾರು ವರ್ಷಗಳ ಹಿಂದೆಯೇ ತಿರುಮಲ ತಿರುಪತಿಯಿಂದ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನು ತಂದು ನಮ್ಮ ಪೂರ್ವಿಕರು ಗೊಲ್ಲರಹಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡಿದರು ಎನ್ನುವುದು ಅಚ್ಚಳಿಯದೇ ಉಳಿದಿದೆ.
ಗೊಲ್ಲರಹಳ್ಳಿಯ ಸದ್ಭಕ್ತರಿಗೇ ಒಲಿದ ಸ್ವಾಮಿ ಕೃಪಾಕಟಾಕ್ಷದಿಂದ ಹಾಗೂ ನಾಗರಿಕ ಭಕ್ತ-ಜನ ವರ್ಗದ ಸಹಕಾರದಿಂದ ನಿತ್ಯವು ಸ್ವಾಮಿ ಅಭಿಷೇಕ ಪೂಜಾ ಸೇವಾ-ಕೈಂಕರ್ಯಗಳನ್ನು ಪುರೋಹಿತರು ಸಾಂಗೋಪಾಂಗವಾಗಿ ನೇರವೇರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ನೂರಾರು ವರ್ಷಗಳಿಂದಲೂ ಪ್ರತಿವರ್ಷವು ಸ್ವಾಮಿ ರಥೋತ್ಸವ ಸಂಭ್ರಮದಿಂದ ಜರುಗುತ್ತದೆ. ಈ ವರ್ಷ ತಿರುಪತಿಯಿಂದ ಆಗಮಿಸುತ್ತಿರುವ ಸ್ವಾಮಿಯ ಸ್ವರ್ಣಾಮುರ್ತಿ ವಿಗ್ರಹದ ಪೂಜೆ ಉತ್ಸಾಹದೊಂದಿಗೆ ವಾರ್ಷಿಕ ರಥೋತ್ಸವ ಸಂಪನ್ನಗೊಳ್ಳುವುದು.
ಈ ವರ್ಷ ನುರಿತ ಕುಶಲ ಶಿಲ್ಪಿಗಳಿಂದ ನೂತನವಾಗಿ ವೈಭವದಿಂದ ನಿರ್ಮಿಸಿರುವ ರಥವನ್ನು ಅಮೃತ ಘಳಿಗೆಯಲ್ಲಿ ಸ್ವಾಮಿಗೆ ಶ್ರದ್ಧಾ-ಭಕ್ತಿಯಿಂದ ಅರ್ಪಿಸುವ ಮೂಲಕ ಸಂಭ್ರಮದಿಂದ ವಾರ್ಷಿಕ ರಥೋತ್ಸವ ಆರಂಭಿಸಲಾಗುವುದು.ನಾಡಿನ ಗಣ್ಯ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳು ಸಾಹಿತಿ-ಕ್ರೀಡಾಪಟುಗಳು ಸ್ವಾಮಿ ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ.
ಈ ಸಂಭ್ರಮೋತ್ಸವದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ತಿರುಪತಿ ಮಾದರಿಯ ಹೊಸ ರಥೋತ್ಸವಕ್ಕೆ ಎಲ್ಲಾ ರಾಜಕೀಯ ಪಕ್ಷದ ರಾಜಕಾರಣಿಗಳು ಗೊಲ್ಲರಹಳ್ಳಿ ಗ್ರಾಮದ ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸೇವಾ ಸಮೀತಿ ಪದಾಧಿಕಾರಿಗಳು ಕೋರಿದ್ದಾರೆ.
ತಿರುಮಲ – ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ನ ವಿಶೇಷ ಅಧಿಕಾರಿ ಪಡಗಾಲ ಶ್ರೀ ಆನಂದ ತೀರ್ಥಚಾರ್ಯ ಗುರುಗಳು ಆಶೀರ್ವಚನ ನೀಡಲಿದ್ದಾರೆ. ತಿರುಪತಿ ಅರ್ಚಕರ ತಂಡವೂ ಆಗಮಿಸಲಿರುವುದು ಮತ್ತೊಂದು
ವಿಶೇಷ.
ಏಪ್ರಿಲ್ 6ರಂದು ಬೆಳಿಗ್ಗೆ 7.30ರಿಂದ ತಿರುಪತಿಯಿಂದ ಬಂದ ಅರ್ಚಕರ ತಂಡದಿಂದ ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶ್ವರ ಸ್ವಾಮಿಯ ಮೂರ್ತಿಗಳಿಗೆ ಪುಷ್ಪಯಾಗ ಪೂಜಾ ಕಾರ್ಯಕ್ರಮವು ಸಾರ್ವಜನಿಕವಾಗಿ ಪ್ರಾರಂಭವಾಗಲಿಗೆ, ಬಳಿಕ ಸಂಜೆ 4 ಗಂಟೆಗೆ ಅಮೃತ ಗಳಿಗೆಯಲ್ಲಿ ಬ್ರಹ್ಮ ರಥೋತ್ಸವವು ಶುರುವಾಗಲಿದೆ.
ಪ್ರತಿವರ್ಷದಂತೆ ಈ ವರ್ಷವೂ ಶ್ರೀ ರಾಮನವಮಿ ಅಂಗವಾಗಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ವೈಭವದಿಂದ ನಡೆಯಲಿದೆ. ತಿರುಪತಿಯಿಂದ ತರಲಾಗುವ ಸ್ವಾಮಿಯ ಸ್ವರ್ಣಾಮೂರ್ತಿ ವಿಗ್ರಹದ ಪೂಜೆ ಉತ್ಸಾಹದೊಂದಿಗೆ ವಾರ್ಷಿಕ ರಥೋತ್ಸವವು ಸಂಪನ್ನಗೊಳ್ಳಲಿದೆ. ಈ ವರ್ಷ ನುರಿತ ಕುಶಲ ಶಿಲ್ಪಿಗಳಿಂದ ನೂತನವಾಗಿ ನಿರ್ಮಿಸಲಾಗಿರುವ ರಥವನ್ನು ಅಮೃತ ಘಳಿಗೆಯಲ್ಲಿಯೇ ಸ್ವಾಮಿಗೆ ಶ್ರದ್ಧಾ ಭಕ್ತಿಯಿಂದ ಅರ್ಪಿಸಲಾಗುವುದು ಎಂದು ದೇವಸ್ಥಾನದ ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ 5ರಂದು ಬೆಳಿಗ್ಗೆ 9 ಗಂಟೆಯಿಂದ ಗಣ ಹೋಮ, ಮಧ್ಯಾಹ್ನ 12.30ಕ್ಕೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತಿರುಪತಿ ಅರ್ಚಕರ ಸಂಗಡಿಗರಿಂದಹೋಮ ನೆರವೇರಲಿದ್ದು, ಸಂಜೆ 4 ಗಂಟೆಗೆ ವಿಷ್ಣು ಸಹಸ್ರ
ನಾಮ ಪಾರಾಯಣ, ನಾಲ್ಕು ವೇದಗಳ ಪಾರಾಯಣ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದೆ.