SUDDIKSHANA KANNADA NEWS/ DAVANAGERE/ DATE:15-02-2025
ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಹಲವು ಧಾರ್ಮಿಕ ಕೇಂದ್ರಗಳಿವೆ, ಈ ಐತಿಹಾಸಿಕ ಧಾರ್ಮಿಕ ಶ್ರದ್ದಾ ಕೇಂದ್ರಗಳಿಗೆ ಇದೀಗ ಮತ್ತೊಂದು ಭವ್ಯ ಮಂದಿರ ಸೇರ್ಪಡೆಯಾಗುತ್ತಿದೆ, ಅದರಲ್ಲೂ ವಿಶೇಷ ಆಕರ್ಷಣೆಯಾಗಿ ಹಿಂದೂಗಳ ಶ್ರದ್ದಾ ಕೇಂದ್ರ ಅಯೋಧ್ಯೆ ರಾಮಮಂದಿರದ ಮೂರ್ತಿ ಮಾದರಿಯಲ್ಲೇ ವಿಗ್ರಹ ಕೆತ್ತನೆಯಾಗಿದ್ದು ಭಕ್ತರನ್ನೂ ಸೆಳೆಯುತ್ತಿದೆ.
ಅಯೋಧ್ಯೆಯ ಬಾಲರಾಮನ ವಿಗ್ರಹ ಇಡೀ ದೇಶದ ಗಮನ ಸೆಳೆದಿದ್ದು ಗೊತ್ತೆ ಇದೆ, ಈ ಕೈ ಚಳಕದ ಹಿಂದೆ ನಮ್ಮ ಕರ್ನಾಟಕದ ಮೈಸೂರಿನವರೇ ಆದ ಅರುಣ್ ಯೋಗಿರಾಜ್ ಅವರು ಇದ್ದಿದ್ದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿತ್ತು, ಹೀಗೆ ಕಲಾಕಾರ ಅರುಣ್ ಯೋಗಿರಾಜ್ ಅವರ ಅದ್ಭುತ ಕೈ ಚಳಕದಿಂದ ಮತ್ತೊಂದು ವಿಗ್ರಹ ಕಣ್ಮನ ಸೆಳೆಯುವಂತಿದೆ. ಈ ಒಂದು ವಿಗ್ರಹ ಸ್ಥಾಪನೆ ಆಗುತ್ತಿರುವುದು ಬೇರೆಲ್ಲೂ ಅಲ್ಲ ನಮ್ಮ ಬೆಣ್ಣೆನಗರಿ ಖ್ಯಾತಿಯ ದಾವಣಗೆರೆಯಲ್ಲಿ.
ಹೌದು ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಈಗಾಗಲೇ ಈ ಒಂದು ಅದ್ಭುತ ವಿಗ್ರಹ ಆಗಮಿಸಿದೆ, ಶ್ರೀ ಬಸವ ಆಂಜನೇಯ ಅಭಿವೃದ್ದಿ ಸಮಿತಿಯಿಂದ ಗ್ರಾಮದವರೇ ಹಣ ಹಾಕಿ ಶಿಲೆಯಲ್ಲೇ ಐದುವರೆ ಕೋಟಿ ವೆಚ್ಚದಲ್ಲಿ ಶ್ರೀ ಆಂಜನೇಯ, ಶ್ರೀ ಬಸವೇಶ್ವರ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಪವನ ಸುತ, ವಾಯುಪುತ್ರ, ವಾನರ ಶ್ರೇಷ್ಠ, ಕೇಸರಿನಂದನ, ರಾಮಧೂತ, ಅಂಜನಿ ಪುತ್ರ, ರಾಮನ ಬಂಟ ಎಂದೆಲ್ಲ ಕರೆಸಿಕೊಳ್ಳುವ ಊರ ಕಾಯುವ ಆಂಜನೇಯನಿಗೆ ಭಕ್ತ ಗಣ ಕೇಳಬೇಕೆ, ಅತೀ ಹೆಚ್ಚು ಭಕ್ತ ಗಣ ಹೊಂದಿರೋ ಹನುಮನ ಭವ್ಯ ದೇವಸ್ಥಾನ ಉದ್ಘಾಟನೆಗೆ ಸಿದ್ದವಾಗಿದೆ.
ಶ್ರೀ ಆಂಜನೇಯ ದೇವಸ್ಥಾನಕ್ಕೆ ವಿಶೇಷವಾಗಿ ಕೆತ್ತನೆಯಾಗಿರುವ ವಿಗ್ರಹ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ, ಅಯೋಧ್ಯೆಯ ಬಾಲರಾಮನ ವಿಗ್ರಹ ಹೋಲುವ ವಿಗ್ರಹವನ್ನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿ ಕೊಟ್ಟಿರೋದು ಭಕ್ತಗಣವನ್ನ ಕೈ ಬೀಸಿ ಕರೆಯುವಂತೆ ಮಾಡಿದೆ, ಈಗಾಗಲೇ ಮೈಸೂರುನಿಂದ ಹಳೇ ಕುಂದುವಾಡ ಗ್ರಾಮಕ್ಕೆ ವಿಗ್ರಹ ಆಗಮಿಸಿದ್ದು, ಮೆರವಣಿಗೆ ಮೂಲಕ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಆಂಜನೇಯ ಸ್ವಾಮಿ ಮಹಿಮೆಯನ್ನು ಹೊಂದಿದ್ದು, ದೇವಸ್ಥಾನಕ್ಕೆ ವಿವಿಧೆಡೆಯಿಂದ ದರ್ಶನಕ್ಕೆ ಆಗಮಿಸುತ್ತಾರೆ, 16ರಂದು ವಿಗ್ರಹ ಮೆರವಣಿಗೆ, ಫೆಬ್ರುವರಿ 17ರಂದು ಬೆಳಿಗ್ಗೆ 11ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಸಾನಿಧ್ಯವನ್ನು ಸಿರಿಗೆರೆಯ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಕಾಗಿನೆಲೆ ಮಹಾಸಂಸ್ಥಾನ ಶ್ರೀ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು, ಹೊಸದುರ್ಗದ ಶ್ರೀ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ, ದಾವಣಗೆರೆಯ ಶ್ರೀಮುರುಘಾ ರಾಜೇಂದ್ರ ಮಠದ ಬಸವಪ್ರಭು ಶ್ರೀಗಳು, ಹದಡಿಯ ಚಂದ್ರಗಿರಿ ಮಠದ ಪರಮಹಂಸ ಶ್ರೀ ಮುರಳೀಧರ ಶ್ರೀಗಳು, ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠ, ಮಹಾಸಂಸ್ಥಾನದ ಪ್ರಸನ್ನಾನಂದಪುರಿ ಶ್ರೀಗಳು, ಶ್ರೀ ಕ್ಷೇತ್ರ ಅವರಗೊಳ್ಳದ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು, ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಮಾದರ ಚನ್ನಯ್ಯ ಶ್ರೀಗಳು, ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಶ್ರೀಗಳು, ಹೊಸದುರ್ಗದ ಭಗೀರಥ ಪೀಠದ ಚಿನ್ಮೂಲಾದ್ರಿ
ಶಿಲಾಪುರಿ ಮಹಾಸಂಸ್ಥಾನದ ಪುರುಷೋತ್ತಮಾನಂದಪುರಿ ಶ್ರೀಗಳು, ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವ ನಾಗಿದೇವ ಶ್ರೀಗಳು, ಹಳೇಕುಂದುವಾಡದ ಕರಿಬಸವೇಶ್ವರ ದೇವಸ್ಥಾನ ಧರ್ಮಧಿಕಾರಿ ರಾಜಣ್ಣ ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಮುಖಂಡರು, ದಾನಿಗಳು, ಅಧಿಕಾರಿಗಳು, ಗ್ರಾಮಸ್ಥರು ಸೇರಿದಂತೆ ಅಪಾರ ಭಕ್ತ ಗಣ ಆಗಮಿಸಲಿದೆ..ಗ್ರಾಮದ ಬಸವ ಆಂಜನೇಯ ಡೊಳ್ಳು ಸಂಘ ಡೊಳ್ಳಿನ ಸದ್ದು ಮಾಡಲು ಸಿದ್ದವಾಗಿದೆ, ಜೊತೆಗೆ 18ರಂದು ಹಳೇ ಕುಂದುವಾಡ ಗ್ರಾಮದಲ್ಲಿ ಸಾವು ತಂದ ಸೌಭಾಗ್ಯ ನಾಟಕ ಪ್ರದರ್ಶನವಾಗಲಿದೆ.
ಸ್ಥಳದಲ್ಲಿ ಹಳೇ ಕುಂದುವಾಡ ಶ್ರೀ ಬಸವ ಆಂಜನೇಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಹೆಚ್.ಜಿ.ಗಣೇಶಪ್ಪ, ಕಾರ್ಯದರ್ಶಿ ಹೆಚ್.ಜಿ.ಮಂಜಪ್ಪ, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಹಿರಿಯ ಮುಖಂಡರಾದ ಹೆಚ್ ಜಿ ದೊಡ್ಡೆಪ್ಪ, ಗೌಡ್ರು ಬಸವರಾಜಪ್ಪ, ಸಿದ್ದನಗೌಡ್ರು, ಚನ್ನಬಸಪ್ಪ ಗೌಡ್ರು, ಹೆಚ್.ಬಿ.ಅಣ್ಣಪ್ಪ, ಜೆ ಮಾರುತಿ, ಬಾರಿಕರ ಚಂದ್ರಪ್ಪ, ನರಸಪ್ಪರ ಶಿವಪ್ಪ, ಮಿಟ್ಟಕಟ್ಟೆ ಚಂದ್ರಪ್ಪ, ಬೆಳ್ಳೂಡಿ ಬಸಣ್ಣ,,ಯು ವಿ ಶ್ರೀನಿವಾಸ್, ಡಿಎಸ್ ಎಸ್ ಮಂಜುನಾಥ್, ಹೆಚ್. ಎಸ್. ಶ್ರೀನಿವಾಸ್, ತಡಿಕೆಪ್ಪರ್ ನಿಂಗಪ್ಪ, ಹೆಚ್ ಎಸ್ ಉಮಾಪತಿ, ದಯಾನಂದ್,ಜೆಸಿ ದೇವರಾಜ್, ಎನ್ ಟಿ ನಾಗರಾಜ್, ಜಿ.ಹೆಚ್.ಗಣೇಶ್, ಎಸ್.ಬಿ.ವಿಜಯ್, ದೇವಸ್ಥಾನ ಸಮಿತಿ ಸದಸ್ಯರು, ಡೊಳ್ಳಿನ ಸಂಘದ ಸದಸ್ಯರು ಸೇರಿದಂತೆ ಇತರರಿದ್ದರು.