ನವದೆಹಲಿ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ 150 ಕ್ಯಾಬಿನ್ ಸಿಬ್ಬಂದಿಯನ್ನು ಮೂರು ತಿಂಗಳ ಕಾಲ ರಜೆ ನೀಡಿ ಕಳುಹಿಸಿದೆ.
ಹಣಕಾಸು ಸೇರಿದಂತೆ ಕಾನೂನು ಗುತ್ತಿಗೆದಾರರ ಸಮಸ್ಯೆಗಳನ್ನು ಸ್ಪೈಸ್ ಜೆಟ್ ಎದುರಿಸುತ್ತಿದೆ. ಈ ಹಿನ್ನಲೆ ವಿಮಾನಗಳು ಕಡಿಮೆ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ಸಮಸ್ಯೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ 150 ಕ್ಯಾಬಿನ್ ಸಿಬ್ಬಂದಿಯನ್ನು ಮೂರು ತಿಂಗಳವರೆಗೆ ವೇತನವಿಲ್ಲದೆ ರಜೆಯ ಮೇಲೆ ಕಳುಹಿಸಲಾಗುವುದು ಎಂದು ವಿಮಾನಯಾನ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಈ ಮೂರು ತಿಂಗಳ ಅವಧಿಯಲ್ಲಿ ಕ್ಯಾಬಿನ್ ಸಿಬ್ಬಂದಿಯ ಎಲ್ಲಾ ಆರೋಗ್ಯ ಸಂಬಂಧಿತ ಪ್ರಯೋಜನಗಳನ್ನು ಸಂಸ್ಥೆ ಒದಗಿಸಲಿದೆ. ಅಲ್ಲದೇ ಸ್ಪೈಸ್‍ಜೆಟ್‍ನ ಉದ್ಯೋಗಿಗಳ ಸ್ಥಾನಮಾನವನ್ನು ಈ ಅವಧಿಯಲ್ಲಿ ಹೊಂದಿರುತ್ತಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಮೂರು ತಿಂಗಳ ಬಳಿಕ ನಮ್ಮ ಸಿಬ್ಬಂದಿಯನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಇದೀಗ ಸ್ಪೈಸ್‍ಜೆಟ್‍ನ ಸುಮಾರು 22 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.