SUDDIKSHANA KANNADA NEWS/ DAVANAGERE/ DATE:14-04-2025
ಧಾರ್ಮಿಕ ಸಭೆ-ಸಮಾರಂಭಗಳಲ್ಲಿ ಕೇಳಿ ಬರುವ ಒಂದು ಮನ ಮಿಡಿಯುವ ಕಥಾನಕ. ಸಂನ್ಯಾಸಿಯೊಬ್ಬ ಪ್ರಾತಃಕಾಲದಲ್ಲಿ ಸ್ನಾನ ಮಾಡಲೆಂದು ನದಿಗೆ ಹೋಗಿದ್ದ. ನದಿಯೊಳಗೆ ಕಾಲಿಡುತ್ತಿದ್ದಂತೆಯೇ ನೀರಿನಲ್ಲಿ ಮುಳುಗಿ ಒದ್ದಾಡುತ್ತಿದ್ದ ಒಂದು ಚೇಳು ಅವನ ಕಣ್ಣಿಗೆ ಬಿತ್ತು. ಅದರ ಮೇಲೆ ಕರುಣೆ ಬಂದು ಸಂನ್ಯಾಸಿಯು ಆ ಚೇಳನ್ನು ಕೈಯಲ್ಲಿ ಹಿಡಿದು ಸುರಕ್ಷಿತವಾಗಿ ನದಿಯ ದಂಡೆಗೆ ಸೇರಿಸಲು ಯತ್ನಿಸಿದ. ಅಷ್ಟರಲ್ಲಿ ಚೇಳು ಅವನ ಕೈಬೆರಳನ್ನು ಕುಟುಕಿತು.

ನೋವಿನಿಂದ ಸಂನ್ಯಾಸಿ ಕೈಕೊಡವಿದಾಗ ಮತ್ತೆ ಆ ಚೇಳು ನದಿಯ ನೀರಿಗೆ ಬಿದ್ದು ಮುಳುಗಿ ಒದ್ದಾಡತೊಡಗಿತು. ಸಂನ್ಯಾಸಿಯು ಅದನ್ನು ನೋಡಿ ಮರುಗಿ ಪುನಃ ಅದನ್ನು ತನ್ನ ಕೈಬೆರಳುಗಳಿಂದ ಎತ್ತಿ ಹಿಡಿದು ದಂಡೆಗೆ ತಂದಿರಿಸಿದ. ಮತ್ತೆ ಚೇಳು ಜೋರಾಗಿ ಕುಟುಕಿದ ಕಾರಣ ಕೈಬೆರಳಿನಿಂದ ರಕ್ತ ಒಸರತೊಡಗಿ ಸಂನ್ಯಾಸಿಗೆ ವಿಪರೀತ ನೋವುಂಟಾಯಿತು. ಸ್ವಲ್ಪ ಹೊತ್ತಿನಲ್ಲಿಯೇ ಚೇಳು ಮತ್ತೆ ನದಿಯತ್ತ ಬಂದು ನೀರಿನಲ್ಲಿ ಒದ್ದಾಡುವುದನ್ನು ನೋಡಿ ಮನ ಕರಗಿ ಸಂನ್ಯಾಸಿಯು ಅದನ್ನು ನದಿಯ ದಂಡೆಗೆ ತಂದಿಡಲು ಮತ್ತೆ ಪ್ರಯತ್ನಿಸಿದ. ಹೀಗೆ ಬಹಳ ಹೊತ್ತು ಚೇಳು ನದಿಯ ನೀರಿನಲ್ಲಿ ಮುಳುಗಿ ಒದ್ದಾಡುವುದು, ಅದು ಕುಟುಕಿ ನೋವುಂಟುಮಾಡಿದರೂ ಸಂನ್ಯಾಸಿಯು ಮರುಗಿ ಅದನ್ನು ನದಿಯ ದಂಡೆಗೆ ತಂದಿಡುವ “ಅಂದರ್ ಬಾಹರ್” ಕಾರ್ಯ ನಡೆದಿತ್ತು. ಇದನ್ನು ದೂರದಿಂದ ಗಮನಿಸಿದ ದಾರಿಹೋಕನೊಬ್ಬ ಹತ್ತಿರ ಬಂದು ನಮಸ್ಕರಿಸಿ ಆ ಸಂನ್ಯಾಸಿಯನ್ನು ಕೇಳಿದ: “ಸಾಧುಗಳೇ, ಈ ಚೇಳು ನಿಮ್ಮನ್ನು ರಕ್ತಬರುವಂತೆ ಕುಟುಕುತ್ತದೆಯೆಂದು ಗೊತ್ತಿದ್ದರೂ ಏಕೆ ಇದನ್ನು ರಕ್ಷಣೆ ಮಾಡಲು ವೃಥಾ ಯತ್ನಿಸುತ್ತಿದ್ದೀರಿ? ಈ ವಿಷಜಂತು ಮುಳುಗಿ ಸಾಯಲಿ ಬಿಡಿ”. ಅದಕ್ಕೆ ಸಂನ್ಯಾಸಿ ಕೊಟ್ಟ ಉತ್ತರ: “ಕುಟುಕುವುದು ಅದರ ಸ್ವಭಾವ, ಮರುಗುವುದು ನನ್ನ ಸ್ವಭಾವ!”
ಪ್ರವಚನಕಾರರಿಂದ ಈ ಕಥಾನಕವನ್ನು ಕೇಳಿದ ಸಭಿಕರು “ಅಯ್ಯೋ ಪಾಪ!” ಎಂದು ಭಾವುಕರಾಗಿ ಉದ್ಗರಿಸಿ ಸಂನ್ಯಾಸಿಯ ಸಾತ್ವಿಕ ಸ್ವಭಾವಕ್ಕೆ ಮಾರುಹೋಗಿ ಗುಣಗಾನ ಮಾಡುತ್ತಾರೆಯೇ ಹೊರತು ಯಾರೂ ಇದರ ಬಗ್ಗೆ ಹೆಚ್ಚಿನ ಚಿಂತನೆ ಮಾಡಲು ಹೋಗುವುದಿಲ್ಲ. “ಶ್ರೋತವ್ಯಂ, ಮಂತವ್ಯಂ, ನಿಧಿಧ್ಯಾಸಿತವ್ಯಮ್” ಎನ್ನುತ್ತದೆ ಬೃಹದಾರಣ್ಯಕ ಉಪನಿಷತ್ (2.4.5). ಅಂದರೆ “ಕಿವಿಗೊಟ್ಟು ಕೇಳಬೇಕು, ಕೇಳಿದ್ದನ್ನು ಮನನ ಮಾಡಿಕೊಳ್ಳಬೇಕು, ನಂತರ ಮನನ ಮಾಡಿಕೊಂಡ ವಿಷಯವನ್ನು ಕುರಿತು ಆಳವಾಗಿ ಚಿಂತಿಸಬೇಕು”. ಪ್ರಬುದ್ಧ ಓದುಗರೇ! ಮುಂದಿನ ಸಾಲುಗಳನ್ನು ಓದುವ ಮುನ್ನ ಕ್ಷಣಕಾಲ ಕಣ್ಮುಚ್ಚಿ ಅಂತರ್ಮುಖಿಗಳಾಗಿ ಸಂನ್ಯಾಸಿ ಮತ್ತು ಚೇಳಿನ ವರ್ತನೆ ಕುರಿತು ಚಿಂತನೆ ಮಾಡಿರಿ. “ಕುಟುಕುವುದು ಚೇಳಿನ ಸ್ವಭಾವ” ಎಂದರೂ ಅದಕ್ಕೆ ಮನುಷ್ಯನಂತೆ ತನಗಾಗದವರನ್ನು ಹುಡುಕಿಕೊಂಡು ಹೋಗಿ ಕುಟುಕುವ ದುಷ್ಟತನವಿಲ್ಲ. ತನ್ನ ಆತ್ಮರಕ್ಷಣೆಗಾಗಿ ಮಾತ್ರ ಅದು ಕುಟುಕುತ್ತದೆ. ಸಂನ್ಯಾಸಿಯು ತನಗೇನೋ ಮಾಡುತ್ತಾನೆ ಎಂಬ ಭಯದಿಂದ ಅದು ಕುಟುಕುತ್ತದೆಯೇ ಹೊರತು ಅದಕ್ಕೆ ಸಂನ್ಯಾಸಿಯ ಮೇಲೆ ಯಾವುದೇ ದ್ವೇಷವಿಲ್ಲ. ಸಂನ್ಯಾಸಿಯು ತನಗೆ ರಕ್ಷಣೆ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬ ಅರಿವೂ ಇಲ್ಲ.
“ಮರುಗುವುದು ನನ್ನ ಸ್ವಭಾವ” ಎಂದು ಹೇಳುವ ಸಂನ್ಯಾಸಿಯ ಮಾತಿನಲ್ಲಿ ಮಾನವೀಯ ಭಾವನೆ ಇದೆ, ನಿಜ. ಮುಳುಗುತ್ತಿರುವ ಚೇಳನ್ನು ಮೊದಲನೆಯ ಬಾರಿ ನೋಡಿದಾಗ ತಟ್ಟನೆ ಅದನ್ನು ಹಿಡಿದು ದಡಕ್ಕೆ ಸೇರಿಸಲು ಮಾಡಿದ ಪ್ರಯತ್ನದಲ್ಲಿ ಆತನ ಸಹಜ ಸ್ವಭಾವವನ್ನು ಕಾಣಬಹುದು. ಅದು ಅವನ ಸ್ವಭಾವಕ್ಕೆ ಅನುಗುಣವಾದ “instant reaction” (ತಕ್ಷಣದ ಪ್ರತಿಕ್ರಿಯೆ). ಇದರಲ್ಲಿ ಸಂನ್ಯಾಸಿಯ ಯಾವ ತಪ್ಪೂ ಇಲ್ಲ.
ಆದರೆ ಚೇಳು ಕುಟುಕಿದ ನಂತರ ಕೈಬೆರಳು ರಕ್ತಸಿಕ್ತವಾಗಿ ನೋವುಂಟಾದ ಮೇಲೂ ಎರಡನೆಯ ಬಾರಿ ಮತ್ತೆ ಅದೇ ಕ್ರಮವನ್ನು ಅನುಸರಿಸಿ ಅಂದರೆ ಕೈಬೆರಳುಗಳಿಂದ ಹಿಡಿದು ರಕ್ಷಣೆ ಮಾಡಲು ಮುಂದಾಗಿದ್ದು ಸಂನ್ಯಾಸಿಯ ದಡ್ಡತನ. ಹೀಗೆಂದ ಮಾತ್ರಕ್ಕೆ ಸಂನ್ಯಾಸಿಯು ತನ್ನ ಕರುಣಾಮಯಿ ಗುಣವನ್ನು ಬಿಡಬೇಕೆಂದಲ್ಲ. ವಿಷಜಂತು ಚೇಳನ್ನು ರಕ್ಷಿಸಬಾರದಿತ್ತು ಎಂದಲ್ಲ. ಅದು ಕುಟುಕುತ್ತದೆಯೆಂಬ ಅರಿವಿನ ಹಿನ್ನೆಲೆಯಲ್ಲಿ ಕೈಬೆರಳುಗಳಿಂದ ಹಿಡಿಯುವ ಬದಲು, ಒಂದು ಕೋಲನ್ನೋ, ಎಲೆಯನ್ನೋ ಅಥವಾ ಇನ್ನಾವುದೇ ಉಪಕರಣವನ್ನೋ ಬಳಸಿಕೊಂಡು ದಡ ಮುಟ್ಟಿಸುವ ಜಾಣ್ಮೆ (wisdom) ಇರಬೇಕಾಗಿತ್ತು. ಆ ಎಚ್ಚರ ವಹಿಸದೆ “ಕುಟುಕುವುದು ಅದರ ಸ್ವಭಾವ, ಮರುಗುವುದು ನನ್ನ ಸ್ವಭಾವ” ಎನ್ನುವ ಸಂನ್ಯಾಸಿಯ ಮಾತಿನ ಆಂತರ್ಯದಲ್ಲಿ ಒಂದು ರೀತಿಯ Ego ಅಡಗಿದೆ ಎಂದು ಹೇಳಬೇಕಾಗುತ್ತದೆ.
ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಆದರೆ ಅಪಾತ್ರರಿಗೆ ಮಾಡಬಾರದು ಎನ್ನುತ್ತವೆ ಭಾರತೀಯ ಧರ್ಮಶಾಸ್ತ್ರಗಳು. 1970 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ನಾವು ವಾಸವಾಗಿದ್ದ ಬಿರ್ಲಾ ಹಾಸ್ಟೆಲ್ ಪಕ್ಕದಲ್ಲಿ ಇನ್ನೊಂದು ವಿದ್ಯಾರ್ಥಿನಿಲಯದಲ್ಲಿದ್ದ ವಿಜ್ಞಾನದ ವಿದ್ಯಾರ್ಥಿಯಾದ ಮೈಸೂರಿನ (ಆಗ ಇನ್ನೂ ಕರ್ನಾಟಕ ಆಗಿರಲಿಲ್ಲ) ಗೆಳೆಯನೊಬ್ಬ ಸಂಜೆ ಹೊತ್ತು ಇದ್ದಕ್ಕಿದ್ದಂತೆಯೇ ನಮ್ಮ ಕೊಠಡಿಗೆ ಬಂದ. ಜೊತೆಯಲ್ಲಿ ಮಧ್ಯವಯಸ್ಸಿನ ಅಪರಿಚಿತ ದಂಪತಿಗಳನ್ನು ಕರೆದುಕೊಂಡು ಬಂದಿದ್ದ. “ಇವರು ಯಾರೋ ನನಗೆ ಗೊತ್ತಿಲ್ಲ. ಕನ್ನಡ ಮಾತನಾಡುತ್ತಾರೆ. ಚಿಕ್ಕಮಗಳೂರಿನ ಕಾಫೀ ಪ್ಲಾಂಟರಂತೆ. ಕಾಶೀ ವಿಶ್ವನಾಥನ ದರ್ಶನ ಮಾಡಲು ಸಪತ್ನೀಕರಾಗಿ ಬಂದಿದ್ದಾರೆ. ರೈಲಿನಲ್ಲಿ ಬರುವಾಗ ರಾತ್ರಿಯ ವೇಳೆ ಇವರ ಹತ್ತಿರ ಇದ್ದ ಎಲ್ಲ ಹಣ ಪಿಕ್ ಪಾಕೆಟ್ ಆಗಿದೆಯಂತೆ.
ವಾಪಾಸ್ ಚಿಕ್ಕಮಗಳೂರಿಗೆ ಹೋಗಲು ಪ್ರಯಾಣದ ಖರ್ಚಿಗೆ ಹಣ ಇಲ್ಲ ಕೊಡಿ ಎಂದು ಕೇಳುತ್ತಿದ್ದಾರೆ. ಇವರಿಗೆ ಸಹಾಯ ಮಾಡಲು ತಿಂಗಳ ಕೊನೆಯಾದ್ದರಿಂದ ನನ್ನ ಹತ್ತಿರವೂ ದುಡ್ಡು ಇಲ್ಲ. ಮನೆಯಿಂದ ಮನಿಯಾರ್ಡರ್ ಬಂದಿಲ್ಲ. ನಿನ್ನ ಹತ್ತಿರ ಇದ್ದರೆ ಇವರಿಗೆ ಕೊಡು” ಎಂದು ಭಾಷಾಭಿಮಾನದಿಂದ ಅವರ ಪರವಾಗಿ ಕೇಳಿಕೊಂಡ. ಚಿಕ್ಕಮಗಳೂರಿಗೆ ವಾಪಾಸು ಹೋದ ಮೇಲೆ ನಿಮ್ಮಿಂದ ಪಡೆದ ಹಣವನ್ನು ಮನಿಯಾರ್ಡರ್ ಮಾಡುತ್ತೇನೆ ಎಂದು ಆ ಕಾಫೀ ಪ್ಲಾಂಟರ್ ದನಿಗೂಡಿಸಿದ. ಅವನ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅವನ ಕಷ್ಟಕ್ಕೆ ಮರುಗಿ ಮಾತನಾಡುವಾಗ ಅವನ ಮಾತಿನ ಧಾಟಿಯಲ್ಲಿ ಏನೋ ವ್ಯತ್ಯಾಸವಿದೆಯೆಂದು ನಮಗೆ ಕ೦ಡುಬ೦ತು. ಆದರೆ ಕನ್ನಡ ಮಾತನಾಡುತ್ತಿದ್ದುದರಿಂದ ಸಂಶಯಪಡುವುದೂ ಕಷ್ಟವಾಗಿತ್ತು.
ವಿದ್ಯಾರ್ಥಿಗಳಾದ ನಮ್ಮ ಹತ್ತಿರ ಅಷ್ಟೊಂದು ಹಣ ಇರಲು ಹೇಗೆ ಸಾಧ್ಯ? ನಿಮ್ಮ ಮನೆಗೆ ಟೆಲಿಗ್ರಾಂ ಮಾಡಿ ನಮ್ಮ ಹಾಸ್ಟೆಲ್ ವಿಳಾಸಕ್ಕೆ ಟೆಲಿಗ್ರಾಂ ಮನಿಯಾರ್ಡರ್ ತರಿಸಿಕೊಳ್ಳಿ. ಅಲ್ಲಿಯವರೆಗೆ ನಮ್ಮ ವಾರ್ಡನ್ ರವರಿಗೆ ಹೇಳಿ ಊಟ-ವಸತಿ ಸೌಲಭ್ಯವನ್ನು ನಮ್ಮ ಹಾಸ್ಟೆಲ್ ನಲ್ಲಿಯೇ ಕಲ್ಪಿಸಿಕೊಡುವುದಾಗಿ ಹೇಳುತ್ತಿದ್ದಂತೆಯೇ ಅವನು “ನನ್ನನ್ನು ಕಳ್ಳ, ಸುಳ್ಳ ಎಂದು ತಿಳಿದಿದ್ದೀರಾ, ನಾನು ಭಿಕ್ಷೆ ಬೇಡಲಿಕ್ಕೆ ಬಂದಿಲ್ಲ” ಎಂದು ಜೋರು ಮಾಡತೊಡಗಿದ. “Yes, you are a cheat” ಎಂದು ತಿರುಗೇಟು ಕೊಡುತ್ತಿದ್ದಂತೆಯೇ ದಂಪತಿಗಳು ಜಾಗ ಖಾಲಿಮಾಡಿದರು. ಅವರನ್ನು ಹಿಂಬಾಲಿಸುತ್ತಾ ಇರು ಎಂದು ಗೆಳೆಯನಿಗೆ ಹೇಳಿ, ಕ್ಯಾಂಪಸ್ ನಲ್ಲಿಯೇ ಬೀಡು ಬಿಟ್ಟಿದ್ದ ಪೊಲೀಸರನ್ನು ಕರೆದುಕೊಂಡು ಬರಲು ಹೋದೆವು. ಪೊಲೀಸರೊಂದಿಗೆ ವಿಶ್ವವಿದ್ಯಾನಿಲಯದ ಪ್ರವೇಶದ್ವಾರದಲ್ಲಿರುವ ಪಂಡಿತ್ ಮದನ ಮೋಹನ ಮಾಲವೀಯಜೀಯವರ ವಿಗ್ರಹದ ಹತ್ತಿರ ಬಂದಾಗ ಗೆಳೆಯ ಕಾಯುತ್ತಿದ್ದ. ಇಲ್ಲೇ ಮುಂದೆ ಲಂಕಾ ರಸ್ತೆಯ ಹೋಟೆಲ್ ನಲ್ಲಿ ಕಾಫಿ ಕುಡಿಯುತ್ತಿದ್ದಾನೆ ಎಂದು ಹೇಳಿದ. ಅಲ್ಲಿಗೆ ಹೋಗುವಷ್ಟರಲ್ಲಿಯೇ ಆ “ಕಾಫೀ ಪ್ಲಾಂಟರ್” ವೇಷಧಾರಿ ಸಪತ್ನೀಕನಾಗಿ ಗೆಳೆಯನ ಕಣ್ ತಪ್ಪಿಸಿ “ವಿಷ್ಣುಭವನ” ಎಂಬ ಹೋಟೆಲ್ಲಿನ ಹಿಂಬಾಗಿಲಿನಿಂದ ಕಾಲ್ಕಿತ್ತು ಅಂತರ್ಧಾನನಾಗಿದ್ದ!
ಅಪಾತ್ರೇ ದತ್ತಮನ್ನಂ ಹಿ ತದ್ದಾನಂ ನಿಷ್ಪಲಂ ಸ್ಮೃತಮ್ |
ಯಥಾಮ್ಲಂ ಕ್ಷೀರಮಾಸಾಧ್ಯ ಸರ್ವಮೇವ ವಿನಶ್ಯತಿ (ಮನುಸ್ಮೃತಿ)
(ಅಪಾತ್ರರಿಗೆ ಮಾಡಿದ ಅನ್ನದಾನ ನಿರರ್ಥಕ
ಹಾಲಿಗೆ ಹುಳಿಯನ್ನು ಹಿಂಡಿದಂತೆ ಎಲ್ಲವೂ ವ್ಯರ್ಥ!)

-ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ.