SUDDIKSHANA KANNADA NEWS/ DAVANAGERE/ DATE:30-01-2025
ದಾವಣಗೆರೆ: ನೀವು ಸೂಕ್ತವಲ್ಲದ ಸಮಯದಲ್ಲಿ ಗ್ರಾಹಕರನ್ನು ಸಂಪರ್ಕ ಮಾಡುವುದಾಗಲಿ ಅಥವಾ ಸಾಲ ವಸೂಲಾತಿ ಮಾಡಬಾರದು. ಅವರ ಮನೆಯಲ್ಲಿ ಮೃತ್ಯು ಸಂಭವಿಸಿದಾಗ, ಅನಾರೋಗ್ಯದ ಸಂದರ್ಭದಲ್ಲಿ ಸಾಲ ವಸೂಲಾತಿ ಮಾಡಬಾರದು. ಪ್ರತಿಯೊಂದು ಕಿರುಹಣಕಾಸು ಸಂಸ್ಥೆಯೂ ಸಾಲಗಾರರೊಂದಿಗೆ ಸಂವಹನ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಿರುಹಣಕಾಸು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಾಲ ವಿತರಣೆ ಮತ್ತು ಮರುಪಾವತಿ ಪ್ರಕ್ರಿಯೆಗಳಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ಸಲಹೆ ಮತ್ತು ಸೂಚನೆಗಳ ಕುರಿತ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದೆಲ್ಲೆಡೆ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿಮೀರಿದೆ. ಸಾಕಷ್ಟು ಜನ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರೈತರು, ಕಾರ್ಮಿಕರು ಚಿಕ್ಕ ಅತಿ ಚಿಕ್ಕ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಸಾಲ ತೆಗೆದುಕೊಂಡಿದ್ದಾರೆ. ಕಿರುಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲ ವಿತರಣೆ ಮತ್ತು ಮರು ಪಾವತಿಯಲ್ಲಿ ಗ್ರಾಹಕರನ್ನು ಹಾಗೂ ಸಿಬ್ಬಂದಿಗಳನ್ನು ಗೌರವದಿಂದ ನೋಡಿಕೊಳ್ಳುವುದು. ಕಂತು ಕಟ್ಟಲು ತಪ್ಪಿದ ಗ್ರಾಹಕರೊಂದಿಗೆ ವ್ಯವಹರಿಸಲು ಆರ್.ಬಿ.ಐ ನಿರ್ದೇಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಗ್ರಾಹಕ ಸ್ನೇಹಿ ಮತ್ತು ನ್ಯಾಯಸಮ್ಮತವಾಗಿರಬೇಕು. ನೀವು ಸೂಕ್ತವಲ್ಲದ ಸಮಯದಲ್ಲಿ ಗ್ರಾಹಕರನ್ನು ಸಂಪರ್ಕ ಮಾಡುವುದಾಗಲಿ ಅಥವಾ ಸಾಲ ವಸೂಲಾತಿ ಮಾಡಬಾರದು ಎಂದು ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ಆಚಾರ್ಯ, ಡಿವೈಎಸ್ಪಿ ಬಸವರಾಜ, ಚನ್ನಗಿರಿ ಉಪವಿಭಾಗದ ಎಎಸ್ಪಿ ಶ್ಯಾಮ್ ವರ್ಗೀಸ್ ಉಪಸ್ಥಿತರಿದ್ದರು.