SUDDIKSHANA KANNADA NEWS/ DAVANAGERE/ DATE-09-05-2025
ದಾವಣಗೆರೆ: ಪೆಹಲ್ಗಾಮ್ ಉಗ್ರರ ದಾಳಿಗೆ ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಮೂಲಕ ಈಗಾಗಲೇ ಪ್ರತ್ಯುತ್ತರ ನೀಡಲಾಗಿದೆ. ಸದ್ಯ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಭೀತಿ ಸೃಷ್ಟಿಯಾಗಿದೆ. ಹಾಗಾಗಿ ಭಾರತದ ಗಡಿ ಭಾಗಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಇತ್ತ ಕರ್ನಾಟದಲ್ಲೂ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಸುಳ್ಳು ಸುದ್ದಿಗಳನ್ನು ಹರಡಿದ್ರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಅವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲೂ ಕೂಡ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ, ಇತರೆ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಗಡಿಯಲ್ಲಿ ಉದ್ವಿಗ್ನತೆ ಬಗ್ಗೆ ಎಲ್ಲಾ ಪೊಲೀಸರಿಗೂ ತಿಳಿದಿದೆ. ಪೊಲೀಸರು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಜನರು ಆತಂಕಕ್ಕೆ ಒಳಗಾಗದ ರೀತಿ ತಿಳಿವಳಿಕೆ ನೀಡಬೇಕು. ಸುಳ್ಳು ಸುದ್ದಿ ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಮಾಹಿತಿಯನ್ನು ಪೋಸ್ಟ್, ಶೇರ್ ಮಾಡುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ದಾವಣಗೆರೆ ಜಿಲ್ಲೆಯಾದ್ಯಂತ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಸಾರ್ವಜನಿಕರ ಗಮನಕ್ಕೆ:
ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ 24×7 ನಿಗಾವಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನಾಸ್ಪದ ಸುದ್ದಿಗಳು, ಸುಳ್ಳು ಸುದ್ದಿಗಳು, ಪ್ರಚೋದಾನಾತ್ಮಕ ಪೋಸ್ಟ್ ಗಳು, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ಹೇಳಿಕೆ ಗಳು ಕಂಡು ಬಂದರೆ ದಾವಣಗೆರೆ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣ ನಿಗಾ ಘಟಕದ ವಾಟ್ಸಾಪ್ ನಂಬರ್ : 9480803208 ಗೆ ಪೋಸ್ಟ್ ಗಳನ್ನು ವಾಟ್ಸಾಪ್ ಮೂಲಕ ಶೇರ್ ಮಾಡಿ. ಮಾಹಿತಿ ನೀಡುವವರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು ಎಂದು ಉಮಾ ಪ್ರಶಾಂತ್ ಅವರು ಹೇಳಿದ್ದಾರೆ.