SUDDIKSHANA KANNADA NEWS/ DAVANAGERE/ DATE:16-02-2025
ದಾವಣಗೆರೆ: ದಾವಣಗೆರೆ ಜಿಲ್ಲೆಯನ್ನಾಗಿಸಿದ್ದು ನಮ್ಮ ದೊಡ್ಡಪ್ಪ ಜೆ. ಹೆಚ್. ಪಟೇಲ್ ಅವರು. ಮುಖ್ಯಮಂತ್ರಿಯಾಗಿದ್ದಾಗ ದಾವಣಗೆರೆ ಜಿಲ್ಲೆಯನ್ನಾಗಿಸಿ ಹೊಸ ಆಶಯ ಕಂಡಿದ್ದ ಸಮಾಜವಾದಿ ನಾಯಕನ ಆಶಯ ಈಡೇರಲಿಲ್ಲ ಎಂಬ ನೋವು ಯಾವಾಗಲೂ ಕಾಡುತ್ತಲೇ ಇರುತ್ತದೆ. ಇದಕ್ಕೆಲ್ಲಾ ರಾಜಕೀಯ ಪಕ್ಷಗಳು ಕಾರಣವೆಂದರೆ ಖಂಡಿತ ಅಲ್ಲ. ಪ್ರತಿಯೊಬ್ಬರದ್ದೂ ಇದರಲ್ಲಿ ಪಾತ್ರವಿದೆ. ಮತದಾರ ಜಾಗೃತನಾಗದ ಹೊರತು ಪ್ರಜಾಪ್ರಭುತ್ವ ಯಶಸ್ವಿ ಆಗಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್ ಹೇಳಿದರು.
ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಯೋಗ ಮಂದಿರದಲ್ಲಿ ಸ್ವಾಭಿಮಾನಿ ಬಳಗವು ಏರ್ಪಡಿಸಿದ್ದ ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ? ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ
ವಿತರಣೆ ಹಾಗೂ ವಿಚಾರ ಸಂಕ್ರಾಂತಿ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಾವು ಶಿವಮೊಗ್ಗ ಜಿಲ್ಲೆಗೆ ಸೇರಿದ್ದೆವು. ದೇವರಾಜ ಅರಸು ಕೃಷಿ ಸುಧಾರಣೆ ತಂದಾಗ ಶಿವಮೊಗ್ಗದಲ್ಲಿ ಕ್ರಾಂತಿಕಾರಕ ಬದಲಾವಣೆ ಆಯಿತು. ಜೆ. ಹೆಚ್. ಪಟೇಲ್ ಅವರು ತನ್ನ ತಂದೆ ಜಮೀನ್ದಾರರಾದರೂ ಗೇಣಿದಾರರ ಪರ ಹೋರಾಟ ನಡೆಸಿದರು. ಶಿವಮೊಗ್ಗದಲ್ಲಿದ್ದ ಇದ್ದ ಹೋರಾಟ ಮನೋಭಾವನೆ ಇಲ್ಲಿ ಕಂಡು ಬರುತ್ತಿಲ್ಲ. ದಾವಣಗೆರೆ ಜಿಲ್ಲೆಯು ಇಂದು ವ್ಯವಹಾರ ಜಿಲ್ಲೆಯಾಗಿದ್ದು, ಪಟೇಲರ ಆಶಯಕ್ಕೆ ಕೊಡಲಿ ಪೆಟ್ಟು ಬಿತ್ತು ಎಂಬ ನೋವು ಇದೆ ಎಂದರು.
ಜಿ. ಬಿ. ವಿನಯ್ ಕುಮಾರ್ ಅವರು ವಿಚಾರದಿಂದ ವಿಮುಖರಾಗಬಾರದು. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿ. ಕರ್ನಾಟಕದಲ್ಲಿ ಹೊಸ ರಾಜಕೀಯ ಶಕ್ತಿ ಅವಕಾಶ ಇದೆ ಎನಿಸುತ್ತಿದೆ. ಕಾಂಗ್ರೆಸ್ ಗೆ ಸಿದ್ದರಾಮಯ್ಯ, ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್ ಗೆ ದೇವೇಗೌಡರ ಕುಟುಂಬ ಅನಿವಾರ್ಯ ಎಂಬ ವಾತಾವರಣ ಇದೆ. ಈ ಮೂವರು ನಾಯಕರ ಮೇಲೆ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ವೈಯಕ್ತಿಕ ವರ್ಚಸ್ಸು ಇಲ್ಲ, ಹಣಬಲದಿಂದಲೇ ಗೆಲ್ಲುತ್ತಿದ್ದಾರೆ. ಹೊಸ ರಾಜಕೀಯ ಶಕ್ತಿ ಉದಯಕ್ಕೆ ಅವಕಾಶ ಇದ್ದು, ಸಾಮಾನ್ಯ ಜನರು ಮನಸ್ಸು ಮಾಡಿದರೆ ಹೊಸ ರಾಜಕೀಯ ಶಕ್ತಿ ಶಕ್ತಿಯುತವಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ದುಡ್ಡಿಲ್ಲದೇ ಯಾವ ಕ್ಷೇತ್ರಗಳಲ್ಲಿಯೂ ಗೆಲ್ಲಲಾಗದು ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ. ಆರ್ಥಿಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತದಾನ ಹಾಕಬೇಕು. ಅಂತಾರಾಷ್ಟ್ರೀಯ, ದೇಶ, ರಾಜ್ಯ ಮತ್ತು ಜಿಲ್ಲೆಗಳ ವಿಚಾರಗಳಿಗೆ ಮತದಾರ ಆದ್ಯತೆ ಕೊಟ್ಟು ಹಕ್ಕು ಚಲಾಯಿಸಬೇಕು ಎಂದು ತಿಳಿಸಿದರು.
ಶಾಸಕರು, ಸಚಿವರು ಲಭ್ಯವಿಲ್ಲದ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಮೂಲಕ ಸಾರ್ವಜನಿಕ ವಿಚಾರಗಳು ಮತ್ತು ಸೌಲಭ್ಯ ಪಡೆಯುವ ಪದ್ದತಿ ಹಿಂದಿನಿಂದಲೂ ಬಂದಿದೆ. ಈಗಲೂ ಮುಂದುವರಿದಿದೆ. ನಮ್ಮ ದೊಡ್ಡಪ್ಪ ಸಿಎಂ ಆಗಿದ್ದಾಗ ಅವರ ಪುತ್ರ ಮಹಿಮಾ ಪಟೇಲ್ ಜನರ ಕೈಗೆ ಸುಲಭವಾಗಿ ಸಿಗುತ್ತಿದ್ದರು. ಈ ಕಾರಣಕ್ಕೆ ಅವರ ಬಳಿ ಕೆಲಸಕ್ಕೆ ಬರುತ್ತಿದ್ದರು. ಈ ಕಾರಣಕ್ಕೆ ಮಹಿಮಾ ಪಟೇಲ್ ಶಾಸಕರಾದರು. ಒಮ್ಮೆ ಮಹಿಮಾ ಪಟೇಲ್ ಅವರು ಜೆ. ಹೆಚ್. ಪಟೇಲ್ ಅವರು ಸಿಎಂ ಆಗಿದ್ದಾಗ ಪ್ರಿನ್ಸಿಪಲ್ ಸೆಕ್ರೆಟರಿ ಕೆಲಸ ಮಾಡಲಿಲ್ಲ ತಂದೆ ಬಳಿ ದೂರಿದ್ದರು. ಆಗ ಜೆ. ಹೆಚ್. ಪಟೇಲ್ ಅವರು ನನಗೆ ಪ್ರಿನ್ಸಿಪಲ್ ಸೆಕ್ರೆಟರಿ. ನಿನಗಲ್ಲ ಎಂದಿದ್ದರು. ಆಗ ತಿಳುವಳಿಕೆ ನೀಡಿದ್ದರು. ಸಹೋದರ ಎಂಎಲ್ ಸಿ ಆಗುವ ಪ್ರಯತ್ನ ಮಾಡಿದರೂ ಸ್ವಸಾಮರ್ಥ್ಯದಿಂದ ಆಗಬೇಕೇ ಹೊರತು ನನ್ನ ನಾಮಬಲ, ಅಧಿಕಾರ ಬಲದಿಂದಲ್ಲ ಎಂದಿದ್ದರು. ಆದ್ರೆ ಈಗ ಪರಿಸ್ಥಿತಿಯೇ ಬೇರೆ ಇದೆ ಎಂದು ನೆನಪು ಮಾಡಿಕೊಂಡರು.
ನಹೆರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಆನಂತರ ಮಕ್ಕಳು, ಸೊಸೆ ಅಧಿಕಾರಕ್ಕೆ ಬರುವ ಪರಂಪರೆ ಮುಂದುವರಿಯಿತು. ತಂದೆ, ಮಗಳು, ಮೊಮ್ಮಗಳು ರಾಜಕಾರಣಕ್ಕೆ ಬರುವುದನ್ನು ಸಮಾಜವಾದಿಗಳು ವಿರೋಧಿಸಿದ್ದರು. ಜನಸೇವೆ ಯಾರೇ ಮಾಡಿದ್ದರೂ ಆಕ್ಷೇಪ ಇಲ್ಲ. ರಾಜಕಾರಣ ವ್ಯವಹಾರ, ಉದ್ಯಮ ಆಗುತ್ತಿದೆ. ರಾಜಕಾರಣ ಸಾಮಾಜಿಕ ಬದ್ಧತೆ, ಜವಾಬ್ದಾರಿ ಅಲ್ಲ ಎಂಬಂತಾಗಿಬಿಟ್ಟಿದೆ ಎಂದರು.
ಈಗ ಅಧಿಕಾರಕ್ಕೆ ಬರಲು, ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಪಡೆಯಲು ಸಾರ್ವಜನಿಕ ಸೇವೆ, ಶ್ರಮ ಪರಿಗಣನೆಗೆ ಬರುವುದಿಲ್ಲ. ಕಾರ್ಮಿಕ, ರೈತ, ದಲಿತ, ಕನ್ನಡಪರ ಹೋರಾಟವೂ ಮುಖ್ಯವಾಗುವುದಿಲ್ಲ. ಪಕ್ಷಕ್ಕಿಂತ ಪಕ್ಷದ ನಾಯಕರಿಗೆ ಎಷ್ಟು ಗೌರವ ಕೊಟ್ಟಿದ್ದೇಯಾ ಎಂಬುದು ಮುಖ್ಯವಾಗಿಬಿಟ್ಟಿದೆ ಎಂದು ಹೇಳಿದರು.
ರಾಜಕೀಯಕ್ಕೆ ಸ್ವಾಭಿಮಾನ ಇಟ್ಟುಕೊಂಡು ಬಂದಿದ್ದರಿಂದಲೇ ಜಿ. ಬಿ. ವಿನಯ್ ಕುಮಾರ್ ಗೆ ಟಿಕೆಟ್ ಸಿಕ್ಕಿಲ್ಲ. ಕೆಲವು ವಿಚಾರಧಾರೆಗಳು ಅರ್ಥವಾದರೂ ಅರ್ಥವಾಗದಂತಿರಬೇಕು. ಅವಮಾನ, ಜನವಿರೋಧಿ ನೀತಿ, ಆಯ್ಕೆ ಮಾನದಂಡ ಸೇರಿದಂತೆ ಎಲ್ಲವೂ ಕಣ್ಣಿಗೆ ಕಾಣಿಸಿದರೂ, ಕಿವಿಗೆ ಬಿದ್ದರೂ ಸುಮ್ಮನಿದ್ದು ಮುಂದುವರಿದರೆ ಯಶಸ್ಸು ಸಿಗುತ್ತೆ. ಆದ್ರೆ, ಸೂಕ್ಷ್ಮತೆ ಮನುಷ್ಯ ಜಿ. ಬಿ. ವಿನಯ್ ಕುಮಾರ್ ಅವರಿಗೆ ಇದು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ ಸಂಸದರೋ ಅಥವಾ ಶಾಸಕರೋ ಆಗಿಬಿಡುತ್ತಿದ್ದರು. ಸ್ವಾಭಿಮಾನಿ ಬಳಗ ಕಟ್ಟಿಕೊಂಡು ಹೋರಾಟಕ್ಕೆ ಕೈ ಹಾಕಿದ್ದಾರೆ. ರಾಜ್ಯದ ಬೇರೆ ಬೇರೆ ಭಾಗಗಳಿಂದಲೇ ಬಂದಿದ್ದೀರಾ. ದೇಶ, ರಾಜ್ಯದಲ್ಲಿ ಪ್ರಾಮಾಣಿಕರಿಗೆ ಕಾಲ ಅಲ್ಲ ಎಂಬ ಮಾತು ಈಗ ಚಾಲ್ತಿಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿನಯ್ ಕುಮಾರ್ ಸ್ವಾಭಿಮಾನದ ಹೋರಾಟ ಮಾಡುತ್ತಿದ್ದಾರೆ. ವಿನಯ್ ಕುಮಾರ್ ಅವರ ವಿಷಯ ಯಶಸ್ವಿಯಾಗಲಿ. ವ್ಯಕ್ತಿಗಳು ಯಶಸ್ವಿ ಆಗುವುದಲ್ಲ, ವಿಚಾರ ಯಶಸ್ವಿ ಆಗಬೇಕು. ಸಿದ್ದರಾಮಯ್ಯನವರು ಇಲ್ಲದಿದ್ದರೆ ಕಾಂಗ್ರೆಸ್ ಏನೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹೊರತುಪಡಿಸಿದರೆ ಬಿಜೆಪಿ ಏನೂ ಇಲ್ಲ. ರಾಷ್ಟ್ರೀಯ ಪಕ್ಷ, ರಾಜಕೀಯ ಪಕ್ಷಗಳಿಗೆ ವ್ಯಕ್ತಿ ಮುಖ್ಯವಾದರೆ ಯಶಸ್ಸು ಅಸಾಧ್ಯ. ಮೋದಿ ವಿಶ್ವಗುರು, ರಾಹುಲ್ ಗಾಂಧಿ ಭಾರತ್ ಜೊಡೋ ಮಾಡಿದ್ದಾರೆ ಎನ್ನುತ್ತಾರೆ. ದುಡ್ಡಿಲ್ಲದೇ ವಿಶ್ವಗುರು ಆಗಿದ್ದರೆ ಮೋದಿ ಅವರು ಒಂದು ಲೋಕಸಭಾ ಕ್ಷೇತ್ರ ಗೆಲ್ಲಿಸಲಿ. ರಾಜೀವ್ ಗಾಂಧಿ ಎಲ್ಲರನ್ನೂ ಒಗ್ಗೂಡಿಸಿದ್ದರೆ ಕಾಂಗ್ರೆಸ್ ನವರು ದುಡ್ಡಿಲ್ಲದೇ ಒಂದು ಸ್ಥಾನ ಗೆಲ್ಲಿಸಲಿ ಎಂದು ಸವಾಲು ಹಾಕಿದ ಅವರು, ಈರುಳ್ಳಿ, ಟೊಮೊಟೊ, ಭತ್ತ ಮಾರುಕಟ್ಟೆ ಆಗುತ್ತಿಲ್ಲ. ಜಾತಿ, ಧರ್ಮ ಒಳ್ಳೆಯ ಮಾರ್ಕೆಟಿಂಗ್ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ವಾಭಿಮಾನಿ ಬಳಗದ ಅಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಹೆಚ್. ಅರುಣ್ ಕುಮಾರ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್, ವಕೀಲರಾದ ಸಿ. ಪಿ. ಅನಿತಾ, ಚಿತ್ರನಿರ್ದೇಶಕರು ಹಾಗೂ ಉಪನ್ಯಾಸಕ ಮಾರುತಿ ಶಾಲೆಮನೆ, ಎಸ್. ಎಂ. ಕೃಷ್ಣ ಕಾಲೇಜಿನ ಪ್ರಾಂಶುಪಾಲ ಕೆ. ಎಸ್. ಗಂಗಾಧರ್, ಗುರುದೇವ ಬಳುಂಡಗಿ ಮತ್ತಿತತರರು ಹಾಜರಿದ್ದರು.





