ಶಿವ
ಪ್ರಿಯ ಓದುಗರೇ,
ಇನ್ನು ಮುಂದೆ ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಪ್ರತಿ ಸೋಮವಾರದಂದು ನಿಮ್ಮ ನೆಚ್ಚಿನ ಸುದ್ದಿಕ್ಷಣ ಡಿಜಿಟಲ್ ಮೀಡಿಯಾಕ್ಕೆ ಅಂಕಣ ಬರೆಯಲಿದ್ದಾರೆ. ಶ್ರೀಗಳ ಸಂದೇಶ ಓದಲು ಲಕ್ಷಾಂತರ ಭಕ್ತರು ಉತ್ಸುಹಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಕಣ ಪ್ರತಿ ಸೋಮವಾರದಂದು ಪ್ರಕಟವಾಗಲಿದೆ.
-“ಸುದ್ದಿಕ್ಷಣ” ಸಂಪಾದಕೀಯ ಮಂಡಳಿ
ಕೃತಘ್ನ ಚಿರತೆಯು ಇಲಿಯಾಗಿ ಬಿಲವನ್ನು ಸೇರಿದ ಕಥೆ..!
ಎಲ್ಲಾ ಕಾಲದಲ್ಲೂ ಸಲೀಸಾಗಿ ಕೃತಘ್ನರಿಗೆ ಅಷ್ಟು ಸುಲಭವಾಗಿ ಶಿಕ್ಷೆಯಾಗಿ ಸುಖಾಂತ್ಯವಾಗುತ್ತದೆ ಎಂದು ಹೇಳಲು ಬರುವುದಿಲ್ಲ, ಏಕೆಂದರೆ ಕೃತಘ್ನರು ಬಲಿತುಕೊಂಡು ತಮ್ಮದೇ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುತ್ತಾರೆ;
ವಾಮಮಾರ್ಗದಿಂದ ಗಳಿಸಿದ ತಮ್ಮ ಹಣದ ಬಲದಿಂದ ಅನೇಕ ಸ್ವಾರ್ಥಿಗಳನ್ನು ಸಾಕಿಕೊಂಡಿರುತ್ತಾರೆ. ಅವರ ಮುಖಾಂತರ ಎಲ್ಲ ರೀತಿಯ ಸಂಚುಗಳನ್ನು ಮಾಡಿಸುತ್ತಾರೆ. ಎರಡು ತಿಂಗಳ ಹಿಂದೆ ಹಳ್ಳಿಯ ಸಮಾರಂಭವೊಂದರಲ್ಲಿ ನಮ್ಮೊಂದಿಗೆ ಭಾಗವಹಿಸಿದ್ದ ಕಥೆಗಳ ಕಣಜರಾದ ಕಾಗಿನೆಲೆಯ ನಿರಂಜನಾನಂದ ಪುರಿ ಶ್ರೀಗಳವರಿಂದ ಕೇಳಿದ ಒಂದು ರೋಚಕ ಕಥೆ ಹೀಗಿದೆ: ಒಂದು ಇಲಿ ಇತ್ತು, ತನ್ನನ್ನು ತಿನ್ನಲು ಅಟ್ಟಿಸಿಕೊಂಡು ಬರುವ ಬೆಕ್ಕುಗಳ ಕಾಟವನ್ನು ತಾಳಲಾರದೆ ಋಷಿಯ ಹತ್ತಿರ ಹೋಗಿ ನಮಸ್ಕರಿಸಿ “ನನ್ನನ್ನು ಬೆಕ್ಕನ್ನಾಗಿ ಮಾಡಿ” ಎಂದು ಬೇಡಿಕೊಂಡಿತು.
ಕಮಂಡಲದಿಂದ ನೀರನ್ನು ಅಭಿಮಂತ್ರಿಸಿ ಋಷಿಯು ಇಲಿಯನ್ನು ಬೆಕ್ಕನ್ನಾಗಿ ಮಾಡಿದ. ಮುಂದೆ ಬೆಕ್ಕಿನ ಕಾಟ ತಪ್ಪಿತು. ಬೆಕ್ಕಾಗಿದ್ದ ಇಲಿಯನ್ನು ನಾಯಿ ಅಟ್ಟಿಸಿಕೊಂಡು ಬರುತ್ತಿತ್ತು. ಪುನಃ ಅದು ಋಷಿಯ ಹತ್ತಿರ ಬಂದು ತನ್ನನ್ನು ನಾಯಿಯನ್ನಾಗಿ ಮಾಡಲು ಬೇಡಿಕೊಂಡು ನಾಯಿಯಾಗಿ ಪರಿವರ್ತನೆಗೊಂಡಿತು.
ನಾಯಿಯ ಉಪಟಳವೇನೋ ತಪ್ಪಿತು. ಆದರೆ ಚಿರತೆ ಅಟ್ಟಿಸಿಕೊಂಡು ಬರಲಾರಂಭಿಸಿತು. ಯಥಾಪ್ರಕಾರ ನಾಯಿಯ ರೂಪದಲ್ಲಿದ್ದ ಇಲಿಯು ಋಷಿಯ ಹತ್ತಿರ ಬಂದು “ನನ್ನನ್ನು ಚಿರತೆಯನ್ನಾಗಿ ಮಾಡಿ, ಕಾಪಾಡಿ!” ಎಂದು ಬೇಡಿಕೊಂಡಿತು. ಋಷಿಯು ನಾಯಿ ರೂಪಿ ಇಲಿಯನ್ನು ಚಿರತೆಯನ್ನಾಗಿ ಮಾಡಿದ. ಕೆಲ ದಿನಗಳ ನಂತರ ದಷ್ಟಪುಷ್ಟವಾಗಿ ಬೆಳೆದ ಆ ಚಿರತೆಯು ಋಷಿಯ ಹತ್ತಿರ ಬಂದಿತು. ಅದು ಗರ್ಜಿಸುತ್ತಾ ಬರುವುದನ್ನು ನೋಡಿ ಈ ಬಾರಿ ತನ್ನನ್ನು ಹುಲಿಯನ್ನಾಗಿ ಮಾಡುವಂತೆ ಕೇಳಲು ಬಂದಿದೆ ಎಂದು ಭಾವಿಸದೆ ನನ್ನನ್ನೇ ತಿಂದು ತೇಗಲು ಬಂದಿದೆ ಎಂದು ಋಷಿಯು ಎಚ್ಚರಗೊಂಡು ಕಮಂಡಲದ ನೀರನ್ನು ಅಭಿಮಂತ್ರಿಸಿ ಪ್ರೋಕ್ಷಣೆ ಮಾಡಿದ. ಕಣ್ತೆರೆಯುವಷ್ಟರಲ್ಲಿ ಚಿರತೆಯು ಇಲಿಯಾಗಿ ಪರಿವರ್ತನೆಯಾಗಿ ಬಿಲವನ್ನು ಸೇರಿಕೊಂಡಿತು!