SUDDIKSHANA KANNADA NEWS/ DAVANAGERE/ DATE:12-03-2024
ದಾವಣಗೆರೆ: ಎಲ್ಲಾ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಚಟುವಟಿಕೆಗಳು ಏಕರೂಪದಲ್ಲಿರಲು ಮತ್ತು ಏಕ ಮಾದರಿಯಲ್ಲಿ ಪ್ರವೇಶ ಪ್ರಕ್ರಿಯೆಯನ್ನು ನಡೆಸಲು ಒಂದೇ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಶೈಕ್ಷಣಿಕ ಚಟುವಟಿಕೆಗಳು ಏಕಕಾಲದಲ್ಲಿ ಮುಕ್ತಾಯವಾಗುವುದರಿಂದ ವಿದ್ಯಾರ್ಥಿಗಳಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ಸಮಕುಲಾಧಿಪತಿ ಡಾ. ಎಂ. ಸಿ. ಸುಧಾಕರ್ ತಿಳಿಸಿದರು.
ಅವರು ದಾವಣಗೆರೆ ವಿಶ್ವವಿದ್ಯಾಲಯದ 11 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ ಪದವಿ, ಸ್ನಾತಕ, ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪದವಿ ಪ್ರಮಾಣ ಪತ್ರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾಗತಿಕ ಪ್ರಪಂಚದ ಸ್ಪರ್ಧಾತ್ಮಕ ಕಾಲ ಇದಾಗಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುವ ಮೂಲಕ ಜೀವನ ಕಟ್ಟಿಕೊಳ್ಳಬೇಕಾಗಿದ್ದು ಆ ಗುಣಮಟ್ಟದಲ್ಲಿ ಶಿಕ್ಷಣ ಪಡೆಯಬೇಕಾಗಿದೆ. ಶಿಕ್ಷಣದ ಜೊತೆಗೆ ಉದ್ಯೋಗ ನೀಡುವ ಕೌಶಲ್ಯತೆ
ಹೆಚ್ಚಿಸಬೇಕಾಗಿದೆ ಎಂದರು.
ದಾವಣಗೆರೆ ವಿ.ವಿ.ಗೆ ನ್ಯಾಕ್ನಿಂದ ಬಿ+ ಶ್ರೇಣಿ ಪಡೆದಿದ್ದು 11 ವರ್ಷಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ. ಗಣಿತಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಇಂತಹ 7 ವಿಶ್ವ ವಿದ್ಯಾನಿಲಯಗಳಿಗೆ ತಲಾ 50 ಲಕ್ಷ ರೂ.ಗಳನ್ನು ಪ್ರಶಸ್ತಿಯಾಗಿ ನೀಡಿದ್ದು ದಾವಣಗೆರೆ ವಿಶ್ವವಿದ್ಯಾನಿಲಯವು ಸೇರಿದೆ ಎಂದರು.
ದಾವಣಗೆರೆ ವಿ.ವಿ.ಕುಲಪತಿಗಳಾದ ಪ್ರೊ.ಬಿ.ಡಿ.ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ 11 ನೇ ಘಟಿಕೋತ್ಸವದಲ್ಲಿ 64 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ ಪದವಿ, 12265 ಪದವಿ ವಿದ್ಯಾರ್ಥಿಗಳಿಗೆ ಪದವಿ, 2092 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತಿದೆ. 2022-23 ನೇ ಸಾಲಿನಲ್ಲಿ 79 ಚಿನ್ನದ ಪದಕಗಳಿದ್ದು ಸ್ನಾತಕ ಪದವಿಯಲ್ಲಿ 10 ಮಹಿಳೆಯರು ಹಾಗೂ 2 ಪುರುಷರು ಸೇರಿ 12 ವಿದ್ಯಾರ್ಥಿಗಳು 20 ಚಿನ್ನದ ಪದಕ ಗಳಿಸಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 33 ವಿದ್ಯಾರ್ಥಿಗಳು 59 ಚಿನ್ನದ ಪದಕ ಪಡೆದಿದ್ದಾರೆ. ವಾಣಿಜ್ಯಶಾಸ್ತ್ರದ ಎಂ.ಕಾಂ ವಿದ್ಯಾರ್ಥಿ ದೀಪ್ತಿಗೌಡರ್ 5 ಚಿನ್ನದ ಪದಕ ಪಡೆದಿದ್ದಾರೆ ಎಂದರು.