SUDDIKSHANA KANNADA NEWS/ DAVANAGERE/ DATE:28-10-2023
ಮಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನ ಮಾಡುತ್ತಿದೆ ಎಂಬುದು ನನಗೆ ಇರುವ ಮಾಹಿತಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah)ಸ್ಫೋಟಕ ಮಾಹಿತಿ ನೀಡಿದ್ದಾರೆ.
Read Also This Story:
ಪ್ರವೀಣ್ ನೆಟ್ಟಾರು ಹತ್ಯೆ ಕೇಸ್, ಇಬ್ಬರು ಆರೋಪಿಗಳ ಮಾಹಿತಿ ನೀಡಿದ್ರೆ 2 ಲಕ್ಷ ರೂ. ಬಹುಮಾನ: ಎನ್ ಐ ಎ ಘೋಷಣೆ
ಮಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಂಡ್ಯ ಶಾಸಕ ರವಿ ಗಾಣಿಗ ಅವರು 50 ಕೋಟಿ ರೂಪಾಯಿ ಆಫರ್ ಅನ್ನು ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಹೇಳಿರುವ ಕುರಿತಂತೆ ನನಗೆ ಗೊತ್ತಿಲ್ಲ. ಈ ಬಗ್ಗೆ ದಯವಿಟ್ಟು ರವಿ ಅವರನ್ನೇ ಕೇಳಿ. 50 ಕೋಟಿ ರೂಪಾಯಿ ಆಫರ್ ನೀಡಿರುವ ಕುರಿತಂತೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಊಟಕ್ಕೆ ಕರೆದಿದ್ದರು. ನಾನು, ಸಚಿವರಾದ ಮಹಾದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಹೋಗಿದ್ದೆವು. ಊಟಕ್ಕೆ ಹೋಗಿದ್ದೇವು ಅಷ್ಟೇ. ಆದ್ರೆ, ಮಸಾಲೆ ಅರಿಯುತ್ತಿರುವುದು ನೀವು. ಬೇರೆ ಬೇರೆ ರೀತಿಯ ವ್ಯಾಖ್ಯಾನ ಮಾಡುತ್ತಿರುವುದು ಮಾಧ್ಯಮದವರು. ಈ ಬಗ್ಗೆ ಮಾಧ್ಯಮದವರು ಏನೇನೋ ವರದಿ ಮಾಡುತ್ತಿದ್ದಾರೆ. ಚರ್ಚಿಸುತ್ತಿದ್ದಾರೆ, ವಿಶ್ಲೇಷಿಸುತ್ತಿದ್ದಾರೆ. ನಾವು ಲೋಕಾಭಿರಾಮವಾಗಿ ಮಾತನಾಡಿದ್ದೇವೆ ಅಷ್ಟೇ. ಇದಕ್ಕೆ ಬಣ್ಣ ಕಟ್ಟುವುದು ಬೇಡ ಎಂದು ಹೇಳಿದರು.
ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಲಾಗುವುದು. ಈ ಬಗ್ಗೆ ನಿರ್ಧಾರ ಆಗಿಲ್ಲ. ಸದ್ಯದಲ್ಲಿಯೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ಮಾಡುತ್ತೇವೆ. ಎರಡನೇ ಹಂತದಲ್ಲಿ ಪಕ್ಷಕ್ಕಾಗಿ ದುಡಿಯುವವರಿಗೆ ಆದ್ಯತೆ ನೀಡುವ ಕುರಿತಂತೆ ಪರೋಕ್ಷವಾಗಿ ಹೇಳಿದರು.
ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಸಿ ಗ್ರೇಡ್ ದೇವಸ್ಥಾನಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರಲ್ವಾ ಎಂಬ ಪ್ರಶ್ನೆಗೆ ಅವರ ಜೊತೆ ಸಮಾಲೋಚನೆ ನಡೆಸುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಭೀಕರ ಬರ ತಲೆದೋರಿದೆ. ಇದುವರೆಗೆ ಕೇಂದ್ರ ಸರ್ಕಾರವು ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ತಾರತಮ್ಯ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ಸಂಕಷ್ಟಕ್ಕೊಳಗಾದ ಜನರಿಗೆ ಕೇಂದ್ರ ಸರ್ಕಾರ ಸಹಾಯ ನೀಡುವ ಜೊತೆಗೆ ಸೂಕ್ತ ಸ್ಪಂದನೆ ಮಾಡಬೇಕು ಎಂದು ಹೇಳಿದರು.