SUDDIKSHANA KANNADA NEWS/ DAVANAGERE/ DATE:28-10-2023
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಿಎಂ ಸಿದ್ದರಾಮಯ್ಯ (Siddaramaiah) ಟ್ವೀಟಾಸ್ತ್ರ ಪ್ರಯೋಗ ಮಾಡಿದ್ದಾರೆ.
ಬಿಜೆಪಿಯವರು ಗ್ರಾಫಿಕ್ಸ್ ಮಾಡಿ ಪಾಯಿಂಟ್ಸ್ ಹಾಕಿ ಕಾಂಗ್ರೆಸ್ ಟೀಕೆ ಮಾಡುವ ಧಾಟಿಯಲ್ಲಿಯೇ ಸಿದ್ದರಾಮಯ್ಯರು ಅನುಸರಿಸತೊಡಗಿದ್ದಾರೆ. ಮಾತ್ರವಲ್ಲ, ಕೇಂದ್ರ ಸರ್ಕಾರದ ವಿರುದ್ಧ ಗುಟುರು ಹಾಕಿದ್ದಾರೆ.
Read Also This Story:
Siddaramaiah: ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿರುವ ಬಗ್ಗೆ ನನ್ಗೆ ಮಾಹಿತಿ ಇದೆ, ಕೈ ಶಾಸಕರಿಗೆ 50 ಕೋಟಿ ರೂ. ಆಫರ್ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ
ಸಿದ್ದು ಟ್ವೀಟಾಸ್ತ್ರ ಹೇಗಿದೆ….?
2017ರಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಯೋಜನಾ ವೆಚ್ಚ ರೂ. 51,148 ಕೋಟಿ ಇದ್ದುದ್ದು ಈಗ ರೂ. 78 ಸಾವಿರ ಕೋಟಿಗೂ ಮೀರಿದೆ. ರಾಜ್ಯ ಸರ್ಕಾರ ವಾರ್ಷಿಕ ರೂ. 10,000 ದಿಂದ ರೂ.15,000 ಕೋಟಿ ಅನುದಾನ ನೀಡಿದರೂ ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ಈಗಿನ ವೆಚ್ಚವೂ ದುಪ್ಪಟ್ಟಾಗಲಿದೆ.
ಆದ್ದರಿಂದ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, ಶೇ.60 ಅನುದಾನವನ್ನು ಒದಗಿಸಬೇಕೆಂದು ಕನ್ನಡಿಗರು ಕೇಂದ್ರವನ್ನು ಒತ್ತಾಯಿಸುತ್ತಲೇ ಇದ್ದಾರೆ. ಪ್ರಧಾನಿ Narendra Modi ಅವರೇ, ಕಳೆದ ನಾಲ್ಕು ವರ್ಷ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಿಮ್ಮದೇ ಪಕ್ಷದ ಡಬ್ಬಲ್ ಇಂಜಿನ್ ಸರ್ಕಾರವಿತ್ತು, ಆಗಲೂ ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸದೆ ಜನರನ್ನು ಮೂರ್ಖರನ್ನಾಗಿಸಿದಿರಿ. ಹನಿ ನೀರಿಗಾಗಿ ನಾಡಿನ ರೈತರು ಇನ್ನೆಷ್ಟು ವರ್ಷ ನಿಮ್ಮ ಬಳಿ ಅಂಗಲಾಚಬೇಕು? ಈಗಲಾದರೂ ಕನ್ನಡಿಗರಿಗೆ ನ್ಯಾಯ ಒದಗಿಸುವಿರಾ?
ಕೇಂದ್ರ Bharatiya Janata Party (BJP) ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರು ನಗರದ ಅಗತ್ಯಕ್ಕೆ ತಕ್ಕಷ್ಟು ನೀರು ಒದಗಿಸುವುದು ಬಹುದೊಡ್ಡ ಸವಾಲು, ಈ ಉದ್ದೇಶಕ್ಕಾಗಿಯೇ ಸಿದ್ಧಪಡಿಸಿರುವ ಯೋಜನೆ ಮೇಕೆದಾಟು ಕೇಂದ್ರ ಸರ್ಕಾರದ ಅನುಮತಿ ಸಿಗದೆ ನೆನೆಗುದಿಗೆ ಬಿದ್ದಿದೆ. ಪ್ರಧಾನಿ Narendra Modi ಅವರೇ, ಕಾವೇರಿ ನಮ್ಮದು, ಮಳೆಗಾಲದಲ್ಲಿ ಹರಿದು ವ್ಯರ್ಥವಾಗಿ ಸಮುದ್ರ ಸೇರುವ ನಮ್ಮ ಪಾಲಿನ ನೀರನ್ನು ನಾವು ಬಳಕೆ ಮಾಡಿಕೊಳ್ಳಲು ಇನ್ನೆಷ್ಟು ವರ್ಷ ಕಾಯಬೇಕು?ಕೇಂದ್ರ Bharatiya Janata Party (BJP) ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮಳೆಕೊರತೆಯಿಂದಾಗಿ ಕೆಆರ್ಎಸ್, ಕಬಿನಿ, ಹೇಮಾವತಿ ಸೇರಿದಂತೆ ಬಹುತೇಕ ಜಲಾಶಯಗಳ ಒಡಲು ಬರಿದಾಗಿದೆ, ಗಾಯದ ಮೇಲೆ ಬರೆ ಎಳೆದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೇಲಿಂದ ಮೇಲೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸುತ್ತಲೇ ಇದೆ. ಪ್ರಧಾನಿ Narendra Modi ಅವರೇ, ಬರದಿಂದ ಕಂಗಾಲಾಗಿರುವ ಕನ್ನಡಿಗರ ಕಷ್ಟ ಅರಿತು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದ್ದ ನೀವು ಕಾವೇರಿ ವಿಚಾರದಲ್ಲಿ ಮೌನಿಯಾದದ್ದು ಯಾಕೆ? ನಿಮ್ಮ ನೇತೃತ್ವದ Bharatiya Janata Party (BJP) ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.