SUDDIKSHANA KANNADA NEWS/ DAVANAGERE/ DATE:07-03-2025
ಬೆಂಗಳೂರು: ಸಿಎಂ ಸಿದ್ದರಾಮಯ್ಯರದ್ದು ದಾಖಲೆಯ 16ನೇ ಬಜೆಟ್. ಈ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದು ಆ ಕೃಷಿಯನುದ್ಯೋಗಿಸುವ
ಜನವನು ಪಾಲಿಸುವುದು
– ಕುಮಾರವ್ಯಾಸ.
ಈ ವಾಕ್ಯ ಹೇಳಿ ರೈತರಿಗೆ ಸೌಲಭ್ಯ ನೀಡುವ ಕುರಿತಂತೆ ಮಾತು ಆರಂಭಿಸಿದ ಸಿದ್ದರಾಮಯ್ಯ ಅವರು, ರಾಜ್ಯದ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿಸಲು, ನಮ್ಮ ಸರ್ಕಾರವು ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ, ಈ ಯೋಜನೆಯಡಿ 10 ಹವಾಮಾನ ವಲಯಗಳಲ್ಲಿ ಕೃಷಿ ಇಲಾಖೆಯ ಅಧೀನದ ಕ್ಷೇತ್ರಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಾತ್ಯಕ್ಷಿಕೆ ತಾಕುಗಳನ್ನು ಅಭಿವೃದ್ಧಿಪಡಿಸಿ, ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಪ್ರಚುರಪಡಿಸಲಾಗುವುದು ಎಂದು ಭರವಸೆ ನೀಡಿದರು.
2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು 428 ಕೋಟಿ ರೂ. ಅನುದಾನ ಕಲ್ಪಿಸಲಾಗುವುದು.
ಕೃಷಿ ಬೆಳೆಗಳಲ್ಲಿ ನೀರನ್ನು ಸಮರ್ಥ ಬಳಕೆ ಮಾಡಿ, ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಂದಾಜು 1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 440 ಕೋಟಿ ರೂ. ಸಹಾಯಧನವನ್ನು ಒದಗಿಸಲಾಗುವುದು.
ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆಗಳ ಅಳವಡಿಕೆ, ಕ್ಷೇತ್ರ ವಿಸ್ತರಣೆ ಮತ್ತು ತೊಗರಿಯನ್ನು ಅಂತರ ಬೆಳೆಯನ್ನಾಗಿ ಪ್ರೋತ್ಸಾಹಿಸುವುದರ ಮೂಲಕ ಉತ್ಪಾದನೆಯಲ್ಲಿ ರಾಷ್ಟ್ರದಲ್ಲೇ ಮುಂಚೂಣಿ ರಾಜ್ಯವನ್ನಾಗಿಸಲು ಉದ್ದೇಶಿಸಿದೆ. ಈ ಮೂಲಕ ರೈತರ ಆದಾಯ ಮತ್ತು ಪೌಷ್ಟಿಕ ಭದ್ರತೆಯನ್ನು ಸುಧಾರಿಸಲು 88 ಕೋಟಿ ರೂ. ಒದಗಿಸಲಾಗುವುದು.
ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕಗಳು ಹಾಗೂ 14 ಸಾಮಾನ್ಯ ಇನ್ಕ್ಯೂಬೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 5,000 ಕಿರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.