SUDDIKSHANA KANNADA NEWS/ DAVANAGERE/ DATE:26-03-2025
ಬೆಂಗಳೂರು: ಕರ್ನಾಟಕ ಬಿಜೆಪಿ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾ ಗೊಂದಲ ಸೃಷ್ಟಿಸುತ್ತಿದ್ದ ಬಿಜೆಪಿ ಭಿನ್ನರಿಗೆ ಶೋಕಾಸ್ ನೊಟೀಸ್ ಕೊಡಲಾಗಿದೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಬಣದವರಿಗೆ ನೊಟೀಸ್ ನೀಡಲಾಗಿದೆ. ಈ ಮೂಲಕ ಎರಡೂ ಬಣದವರಿಗೆ ಎಚ್ಚರಿಕೆ ಗಂಟೆ ರವಾನಿಸಲಾಗಿದೆ.
ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ, ಮಹಾನಗರ ಪಾಲಿಕೆ ಚುನಾವಣೆ ಬರುತ್ತಿವೆ. ಇಂಥ ಹೊತ್ತಿನಲ್ಲಿ ಬೈದಾಡಿಕೊಳ್ಳುತ್ತಾ ಓಡಾಡುತ್ತಿರುವ ನಾಯಕರಿಗೆ ಬಿಸಿ ಮುಟ್ಟಿಸಿದೆ. ನೊಟೀಸ್ ಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.
ವಿಜಯೇಂದ್ರ ಬಣದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಸೇರಿ ರಾಜ್ಯ ಬಿಜೆಪಿಯ ಐವರು ನಾಯಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿದ್ದು, ಪಕ್ಷದ ಶಿಸ್ತು ಉಲ್ಲಂಘಿಸಿದಕ್ಕೆ 72 ಗಂಟೆಗಳಲ್ಲಿ ಉತ್ತರಿಸುವಂತೆ ನೋಟಿಸ್ನಲ್ಲಿ ಹೇಳಲಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡ ಹರಿಹರ ಶಾಸಕ ಬಿಪಿ ಹರೀಶ್ಗೆ ನೋಟಿಸ್ ನೀಡಲಾಗಿದೆ. ಅತ್ತ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡ ಮಾಜಿ ಶಾಸಕರಾದ ಎಂಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡುಗೆ ನೋಟಿಸ್ ನೀಡಲಾಗಿದೆ. ಶಿವರಾಮ್ ಹೆಬ್ಬಾರ್, ಸೋಮಶೇಖರ್ಗೂ ನೋಟಿಸ್ ಹೋಗಿದೆ.
ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿರುವ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್ಟಿ ಸೋಮೇಶೇಖರ್ಗೂ ಕೂಡ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದ್ದು, ಉತ್ತರಿಸುವಂತೆ ಸೂಚನೆ ನೀಡಿದೆ.