SUDDIKSHANA KANNADA NEWS/ DAVANAGERE/ DATE:21-10-2024
ದಾವಣಗೆರೆ: ಕಳೆದ ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಬಡ ರೈತರಿಗೆ ಪಕ್ಷಬೇಧ ಮರೆತು ಶೀಘ್ರದಲ್ಲೇ ಬಗರ್ ಹುಕುಂ ಸಾಗುವಳಿ ಪತ್ರ ವಿತರಣೆ ಮಾಡಬೇಕೆಂದು ಶಾಸಕ ಬಸವರಾಜು ವಿ. ಶಿವಗಂಗಾ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಕಚೇರಿಯಲ್ಲಿ ನಡೆದ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು ರೈತರೆಂದರೆ ನನಗೆ ಎಲ್ಲಾ ಒಂದೇ. ಇಲ್ಲಿ ಯಾವ ಪಕ್ಷ ಜಾತಿ ಧರ್ಮ ಎಂದು ನೋಡದೇ ಅವರಿಗೆ ಸಾಗುವಳಿ ಪತ್ರವನ್ನು ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರದ ನಿಯಮದಡಿಯಲ್ಲಿ ಸಾಗುವಳಿ ಪತ್ರಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ರೈತರ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಒಂದು-ಎರಡು ಎಕೆರೆ ಭೂಮಿಯನ್ನು ಉಳುಮೆ ಮಾಡಿಕೊಂಡು ರೈತರು ಜೀವನ ನಡೆಸುತ್ತಿದ್ದಾರೆ. ಅದೇ ಜಮೀನು ನಂಬಿ ಎಷ್ಟೋ ರೈತರು ಬದುಕು ಸಾಗಿಸುತ್ತಿದ್ದಾರೆ. ಇಂಥ ರೈತರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ, ಅಧಿಕಾರಿಗಳು
ರೈತರಿಗೆ ಸಾಗುವಳಿ ಪತ್ರ ನೀಡುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದರು.
ನಿಗದಿತ ಫಾರಂನಲ್ಲಿ ಸಾಗುವಳಿ ಪತ್ರಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ ಹಕ್ಕುಪತ್ರ ನೀಡುವುದು ನಮ್ಮ ಜವಾಬ್ದಾರಿ ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರ ಹಿತಕ್ಕಾಗಿ ಕೆಲಸ ಮಾಡಬೇಕೆಂದರು. ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ವಿನಃ ಕಾರಣ
ಬಡ ರೈತರ ಮೇಲೆ ದಬ್ಬಾಳಿಕೆ ನೋಟೀಸ್ ಜಾರಿ ಮಾಡಬಾರದು, ನಿಯಮಾನುಸಾರ ಅರ್ಜಿ ಸಲ್ಲಿಸಿದ ರೈತರಿಗೆ ನ್ಯಾಯ ಒದಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕೆಂದು ಬಸವರಾಜು ವಿ. ಶಿವಗಂಗಾ ತಿಳಿಸಿದರು.
ಈ ಕುರಿತಂತೆ ತಹಶೀಲ್ದಾರ್ ಶಂಕರಪ್ಪ ಅವರು ಶಾಸಕರಿಗೆ ಬಗರ್ ಹುಕುಂ ಸಾಗುವಳಿ ಪತ್ರದ ಬಗ್ಗೆ ಮಾಹಿತಿ ನೀಡಿದರು. ಮುಂದಿನ ಸಭೆಯಲ್ಲಿ ಸಾಗುವಳಿ ಪತ್ರಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ರೈತರ ಕುರಿತು ಸಂಪೂರ್ಣ ಮಾಹಿತಿಯೊಂದಿಗೆ ವರದಿ ಒಪ್ಪಿಸಲಾಗುವುದೆಂದು ತಿಳಿಸಿದರು. ಈ ವೇಳೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಬಿ. ಕೆ ಉತ್ತಮ್, ತಾಲ್ಲೂಕು ಆಡಳಿತದ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.