SUDDIKSHANA KANNADA NEWS/ DAVANAGERE/ DATE:06-03-2025
ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ದಾವಣಗೆರೆ ಜಿಲ್ಲಾ ಮಹಿಳಾ, ಯುವ ಮತ್ತು ನಗರ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಜರುಗಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಶಾಮನೂರು ಶಿವಶಂಕರಪ್ಪನವರು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಸಂಘಟನೆಗೆ ಜೀವ ಬಂದಿದ್ದು, ಯಾವ ಮಠಾಧೀಶರು ಮಾಡಲಾಗದ ಕೆಲಸವನ್ನು ಅವರು ಸಮಾಜಕ್ಕೆ ಮಾಡಿದ್ದಾರೆ. ಸ್ವಾಮೀಜಿಗಳ ವಲಯದಲ್ಲಿ ಸಹ ಅವರಿಗೆ ಮತ್ತು ಅವರ ಮಾತಿಗೆ ಸಹಕಾರ ಮತ್ತು ಮನ್ನಣೆ ಇದೆ ಎಂದು ಅಭಿಪ್ರಾಯ ಪಟ್ಟರು.
ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜವಳಿ ಉದ್ಯಮಿ ಬಿ.ಸಿ ಉಮಾಪತಿ ಮಾತನಾಡಿ, ಯಾವುದೇ ಸಂಘಟನೆಯಲ್ಲಿ ಅಧಿಕಾರ ಪಡೆಯುವುದು ಬರೀ ಸೇವೆಗಾಗಿ ಎಂದು ಭಾವಿಸಬಾರದು, ಅದನ್ನು ಕರ್ತವ್ಯ ಎಂದು ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಡಾ. ಶಾಮನೂರು ಶಿವಶಂಕರಪ್ಪನವರು ಸಮಾಜದ ಹಿತದ ಪ್ರಶ್ನೆ ಬಂದಾಗ ಸಿಡಿದೆದ್ದು ಪಕ್ಷಕ್ಕಿಂತ ಸಮಾಜ ಮುಖ್ಯ, ಸಮಾಜದ ಹಿತ ಮುಖ್ಯ ಎಂದು ಘರ್ಜಿಸಿ ಸಮಾಜದ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದ್ದರು. ಸಮಾಜದಲ್ಲಿ ವೀರಶೈವ ಬೇರೆ, ಲಿಂಗಾಯಿತವೇ ಬೇರೆ ಎಂಬಂತಹ ದ್ವಂದ್ವ ನಿಲುವು ಸೃಷ್ಟಿಸಿ ಸಮಾಜವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ವೀರಶೈವ ಲಿಂಗಾಯತ ಒಂದೇ, ಇದನ್ನು ಬಿಂಬಿಸಲು ನಾವು ಪ್ರಥಮವಾಗಿ ಮಠದ ಸ್ವಾಮೀಜಿಗಳನ್ನು ಒಂದುಗೂಡಿಸಬೇಕಾಗಿದೆ ಎಂದರು.
ದಾವಣಗೆರೆ ಜಿಲ್ಲಾ ಮಹಿಳಾ ಮತ್ತು ಯುವ ಘಟಕ, ಮಹಾನಗರಪಾಲಿಕೆ ಘಟಕ ಮತ್ತು ಮಹಿಳಾ ಘಟಕಗಳ ಪದಾಧಿಕಾರಿಗಳಿಗೆ ನೇಮಕಾತಿ ದೃಢೀಕರಣ ಪತ್ರವನ್ನು ಗಿರೀಶ್ ಮಾಗಾನಹಳ್ಳಿ, ವಿಶ್ವನಾಥ್ ಬಳ್ಳಾಪುರ, ವಿಜಯ ಬಸವರಾಜ್, ಸುಧಾ ಅಜ್ಜಂಪುರ, ನಿರ್ಮಲ, ಯಶೋಧ, ನಿಧಿ ಐನಹಳ್ಳಿ ಇವರು ವಿತರಿಸಿದರು. ಹೊರ ಆವರಣದಲ್ಲಿ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮ ನಾವು ಮುಕ್ತ ಮನಸ್ಸಿನಿಂದ ಸಮಾಜ ಸಂಘಟನೆ ಮಾಡಬೇಕು ಎಂಬುದಕ್ಕೆ ನಿದರ್ಶನ , ಡಾ ಶಾಮನೂರು ಶಿವಶಂಕರಪ್ಪನವರು ಪಕ್ಷವನ್ನು ಹಿಂದಿಕ್ಕಿ ಸಮಾಜ ಮುಖ್ಯ ಎಂದು ಘರ್ಜಿಸಿದಾಗ ಸಮಾಜ ಒಡೆಯುವುದು ತಪ್ಪಿತು ಎಂದು ಹೇಳಿದರು.
ಉಪಾಧ್ಯಕ್ಷ ಡಾ.ಅಥಣಿ ಎಸ್. ವೀರಣ್ಣ ಮಾತನಾಡಿ, ಜಾತಿ ಗಣತಿ ಆದಲ್ಲಿ ಎಲ್ಲರೂ ಸೇರಿ ಸಮಾಜದ ನೈಜ ಸಂಖ್ಯೆಯನ್ನು ತೋರಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಸಮಾಜದ ಜನಸಂಖ್ಯೆ ಕಡಿಮೆಯಾಗಿ ದುಷ್ಪರಿಣಾಮವಾಗುತ್ತದೆ ಎಂದು
ಹೇಳಿದರು.
ಸಂಯೋಜನೆಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅವಿನಾಶ್ ಬಸವರಾಜ್, ಮಹಾಸಭಾ ಚನ್ನಗಿರಿ ಪ್ರತಿನಿಧಿ ಉಮೇಶ್ ರವರು ಸ್ವಾಗತಿಸಿದರು, ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಾವಣಗೆರೆ ವಿವಿಯ ಪ್ರೊ. ಅಶೋಕ್ ಕುಮಾರ್ ಪಲ್ಲೇದ್ ರವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ರಾಜೇಶ್ವರಿ ವಂದಿಸಿದರು.