SUDDIKSHANA KANNADA NEWS/ DAVANAGERE/ DATE:16-04-2025
ದಾವಣಗೆರೆ: ರಾಜ್ಯದಲ್ಲಿ ಜಾತಿಜನಗಣತಿ ವಾಗ್ಯುದ್ಧ ಕಾಂಗ್ರೆಸ್ ಪಕ್ಷದಲ್ಲಿಯೋ ಜೋರಾಗಿದೆ. ವರದಿ ಜಾರಿಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದರೆ, ಇತ್ತ ಕಾಂಗ್ರೆಸ್ ಪಕ್ಷದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಶಾಸಕರು ರೊಚ್ಚಿಗೆದ್ದಿದ್ದಾರೆ. ಯಾವುದೇ ಕಾರಣಕ್ಕೂ ಜಾತಿಗಣತಿ ವರದಿ ಜಾರಿ ಮಾಡಬಾರದು ಎಂದು ಪಟ್ಟುಹಿಡಿದಿದ್ದರೆ, ಮತ್ತೊಮ್ಮೆ ವರದಿ ತಯಾರಿಸುವಂತೆ ಆಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯರು ಮಾತ್ರ ಏಪ್ರಿಲ್ 17ಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದು ಸಚಿವ ಸಂಪುಟದಲ್ಲಿ ಭಾರೀ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರು ಈಗಾಗಲೇ ಗುಟುರು ಹಾಕಿದ್ದು, ಟಗರು ಎಂದೇ ಖ್ಯಾತರಾಗಿರುವ ಸಿದ್ದರಾಮಯ್ಯ ಅವರು ಪತರುಗುಟ್ಟಿದ್ದಾರೆ. ಲಿಂಗಾಯತ ಶಾಸಕರ ಕೆಂಗಣ್ಣಿಗೆ ಗುರಿಯಾಗಿರುವ ಸಿದ್ದರಾಮಯ್ಯರಿಗೆ ವರದಿ ಜಾರಿ ಸಂಬಂಧ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಸಂಬಂಧ ಲಿಂಗಾಯತ ವಿರೋಧಿ ಹಣೆಪಟ್ಟಿ ಹೊಂದಿದ್ದ ಸಿದ್ದರಾಮಯ್ಯರಿಗೆ ಮತ್ತೆ ಕಳಂಕ ಬರುವ ಸಾಧ್ಯತೆ ನಿಚ್ಚಳವಾಗಿದೆ.
ಕಾಂಗ್ರೆಸ್ ಸರ್ಕಾರ ಬಂದ ಆರಂಭದಲ್ಲೇ ಶಾಮನೂರು ಶಿವಶಂಕರಪ್ಪ ಗುಟುರು ಹಾಕಿದ್ದರು. ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಉನ್ನತ ಹುದ್ದೆಯಲ್ಲಿ ಇರಲು ಬಿಡುತ್ತಿಲ್ಲ. ವಿನಾಕಾರಣ ತೊಂದರೆ ನೀಡಲಾಗುತ್ತಿದೆ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರ ಸಾಕಷ್ಟು ಭುಗಿಲೆದ್ದಿತ್ತು. ಸಿದ್ದರಾಮಯ್ಯರಿಗೆ ಇರಿಸು ಮುರಿಸು ತಂದಿತ್ತು. ಮತ್ತೆ ಜಾತಿಜನಗಣತಿ ಭೂತ ಎದ್ದಿದ್ದು, ಮತ್ತೆ ಲಿಂಗಾಯತರು ಮತ್ತು ಒಕ್ಕಲಿಗರ ವಿರೋಧ ಕಟ್ಟಿಕೊಳ್ಳುವ ಆಂತಕವೂ ಇದೆ.
ಏನಂದ್ರು ಶಾಮನೂರು ಶಿವಶಂಕರಪ್ಪ?
ಕರ್ನಾಟಕ ರಾಜ್ಯದಲ್ಲಿ ಲಿಂಗಾಯತರು, ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡುವುದಕ್ಕೆ ಆಗುತ್ತಾ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವೀರಶೈವ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಕ್ಕಲಿಗರು ನಂತರದ ಸ್ಥಾನದಲ್ಲಿದ್ದಾರೆ. ಈ ಎರಡೂ ಸಮುದಾಯಗಳನ್ನೂ ಎದುರು ಹಾಕಿಕೊಂಡು ರಾಜ್ಯಭಾರ ಮಾಡುವುದಕ್ಕೆ ಆಗುವುದಿಲ್ಲ ಎಂದು ಗುಡುಗಿದರು.
ಜಾತಿ ಜನಗಣತಿ ವರದಿ ಬಿಡುಗಡೆಗೆ ತುದಿಗಾಲಲ್ಲಿ ನಿಂತಿರುವ ರಾಜ್ಯ ಸರ್ಕಾರಕ್ಕೆ ಮಾತಿನ ಚಾಟಿ ಬೀಸಿರುವ ಶಾಮನೂರು ಶಿವಶಂಕರಪ್ಪ ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡುತ್ತೇವೆಂದು ಸುಮ್ಮನೇ ಹೇಳುತ್ತಿದ್ದಾರಷ್ಟೇ. ರಾಜ್ಯದಲ್ಲಿ ವೀರಶೈವ ಲಿಂಗಾಯತರು ಫಸ್ಟ್, ಒಕ್ಕಲಿಗರು ಸೆಕೆಂಡ್ ಇದ್ದಾರೆ ಎಂದರು.
ನಮ್ಮನ್ನು ಎದುರು ಹಾಕಿಕೊಂಡು, ರಾಜ್ಯಭಾರ ಮಾಡುವುದಕ್ಕೆ ಆಗುತ್ತಾ, ಒಂದು ವೇಳೆ ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡಿದ್ದೇ ಆದಲ್ಲಿ ವೀರಶೈವ ಲಿಂಗಾಯತರು ಹಾಗೂ ಒಕ್ಕಲಿಗರು ಇಬ್ಬರೂ ಸೇರಿಕೊಂಡೇ ಹೋರಾಟ ಮಾಡುತ್ತೇವೆ. ಈಗಾಗಲೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಭೆಯನ್ನೂ ನಡೆಸಿ, ಮುಂದಿನ ನಡೆಗಳ ಬಗ್ಗೆಯೂ ನಾವು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಏನು ಹೇಳಿದ್ರು?
ಇನ್ನು ಕಲಬುರ್ಗಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯರು ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಜಾತಿಗಣತಿ ವರದಿ ರೂಪಿಸಲಾಗಿದೆ. ಯಾರಿಗೂ ಅನ್ಯಾಯವಾಗುವುದಿಲ್ಲ. ಏಪ್ರಿಲ್ 17ಕ್ಕೆ ಕರೆದಿರುವ ಸಚಿವ ಸಂಪುಟದಲ್ಲಿ
ಸುದೀರ್ಘವಾಗಿ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ. ಸ್ವಲ್ಪ ಮಟ್ಟಿಗೆ ತಣ್ಣಗಾದಂತೆ ಕಂಡಿರುವ ಸಿದ್ದರಾಮಯ್ಯರು ಪಟ್ಟು ಸಡಿಲಿಸುತ್ತಾರೋ? ಚರ್ಚೆಗೆ ಬಿಡುತ್ತಾರೋ? ಅಂಗೀಕಾರ ಮಾಡಿ ಲಿಂಗಾಯತರು ಮತ್ತು ಒಕ್ಕಲಿಗರ ವಿರೋಧ ಎದುರು
ಹಾಕಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.