SUDDIKSHANA KANNADA NEWS/ DAVANAGERE/ DATE:23-03-2025
ದಾವಣಗೆರೆ: ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಎಲೆಬೇತೂರು ಗ್ರಾಮದಲ್ಲಿ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 6.36 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ನಗರದ ಮುದ್ದಾಬೋವಿ ಕಾಲೋನಿಯ ಬೇತೂರು ರಸ್ತೆ ವಾಸಿ ಸಾದಿಕ್ ಎಸ್ (21) ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಂಧಿಸಲಾಗಿದೆ.
ಕಳೆದ ಮಾರ್ಚ್ 22ರ ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಎಲೆಬೇತೂರು ಗ್ರಾಮದ ಪೂರ್ಣಿಮಾ ಅವರ ಮನೆಯ ಬಾಗಿಲ ಬೀಗ ಮುರಿದು ನಗದು ಹಣ ಮತ್ತು ಒಡವೆಗಳು ಕಳ್ಳತನ ಮಾಡಲಾಗಿತ್ತು. ದಾವಣಗೆರೆ ಗ್ರಾಮಾಂತರ ಪೊಲೀಸ್
ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಕಳ್ಳತನ ನಡೆದ ದಿನದದೇ ಬಿಳಿಚೋಡು ಪೊಲೀಸ್ ಠಾಣೆಯ ಮುಗ್ಗಿದರಾಗಿ ಹಳ್ಳಿ ಗ್ರಾಮದಲ್ಲಿ ಸರಣಿಯಾಗಿ 5 ಮನೆಗಳಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲೂ ಕೇಸ್ ದಾಖಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆ ಸಲುವಾಗಿ ತಂಡ ರಚಿಸಲಾಗಿತ್ತು.
ಆರೋಪಿತರಿಂದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಬಿಳಿಚೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 3,03,000 ರೂ ಬೆಲೆಯ 49.93 ಗ್ರಾಂ ತೂಕದ ಬಂಗಾರದ ಆಭರಣಗಳು, 88,000 ರೂ ಮೌಲ್ಯದ 760.29 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 18,600 ರೂ ಬೆಲೆಯ 2 ಮೊಬೈಲ್ ಫೋನ್, 15,000 ರೂ ಮೌಲ್ಯದ ಒಂದು ತಾಮ್ರದ ಹಂಡೆ, 12,000 ರೂ ಬೆಲೆಯ 6 ಖಾಲಿ ಸಿಲಿಂಡರ್ ಗಳು ಹಾಗೂ 80,000 ರೂ ನಗದು, ಕೃತ್ಯಕ್ಕೆ ಬಳಸಿದ್ದ 1,20,000 ರೂ ಮೌಲ್ಯದ 2 ದ್ವಿ ಚಕ್ರ ವಾಹನಗಳು ಹಾಗೂ ಒಂದು ಕಬ್ಬಿಣದ ರಾಡ್ ಸೇರಿದಂತೆ ಒಟ್ಟು 6,36,600 ರೂ ಮೌಲ್ಯದ ವಸ್ತುಗಳನ್ನು ಜಫ್ತಿ ಮಾಡಲಾಗಿದೆ. ಬಂಧಿತರ ವಿರುದ್ಧ ಒಟ್ಟು 9 ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿತರು ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ಗ್ರಾಮಾಂತರ ಠಾಣೆಯ ಪಿಐ ಕಿರಣ್ ಕುಮಾರ್ ಇ.ವೈ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ನಿರೀಕ್ಷಕ ಇಸ್ಮಾಯಿಲ್, ಪಿಎಸ್ ಐ ಹಾರೂನ್ ಅಕ್ತರ್, ಅಬ್ದುಲ್ ಖಾದರ್ ಜಿಲಾನಿ, ಸಿಬ್ಬಂದಿಯವರಾದ ನಾಗಭೂಷಣ, ಮಹಮ್ಮದ್ ಯೂಸುಫ ಅತ್ತಾರ, ವೀರೇಶ್ ಪಿ.ಎಂ, ಹನುಮಂತಪ್ಪ, ಹಾಗೂ ಬಿಳಿಚೋಡು ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪ್ರವೀಣ್, ಹನುಮಂತ ಅವರನ್ನೊಳಗೊಂಡ ತಂಡ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ರಾಜನಾಗ ಜಿ.ಎನ್, ನಾಗರಾಜ ಕುಂಬಾರ, ವೀರೇಶ್ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.