SUDDIKSHANA KANNADA NEWS/ DAVANAGERE/ DATE:28-11-2024
ದಾವಣಗೆರೆ: ಎಲ್ಲೆಡೆ ಕುಟುಂಬ ರಾಜಕಾರಣ ಹೆಚ್ಚಾಗುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಲ್ಲಿಯೂ ಇಂದು ಫ್ಯಾಮಿಲಿ ಪೊಲಿಟಿಕ್ಸ್ ಜಾಸ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ತೃತೀಯ ರಂಗದ ಶಕ್ತಿಯ ಅವಶ್ಯಕತೆ ಇದೆ. ನಾಲ್ಕೈದು ವರ್ಷಗಳಲ್ಲಿ ಸ್ವಾಭಿಮಾನಿ ಬಳಗವು ಬಲಿಷ್ಠವಾದ ತೃತೀಯ ರಂಗವಾಗಿ ಬೆಳೆದೇ ಬೆಳೆಯುತ್ತದೆ. ಇನ್ನೆರಡು ವರ್ಷಗಳ ಬಳಿಕ ಬೀದರ್ ನಿಂದ ಚಾಮರಾಜನಗರದವರೆಗೆ ಪಾದಯಾತ್ರೆ ನಡೆಸಲು ಆಲೋಚನೆ ಇದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಘೋಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ನಾಲ್ಕು ವರ್ಷಗಳಲ್ಲಿ ಸ್ವಾಭಿಮಾನಿ ಬಳಗವು ರಾಜ್ಯದಲ್ಲಿ ಗಟ್ಟಿಯಾಗಲಿದೆ, ಸಂಘಟಿತವಾಗಲಿದೆ. ನಾನು ಉಡ ಇದ್ದ ರೀತಿ. ಒಮ್ಮೆ ಅಂದುಕೊಂಡದ್ದನ್ನು ಸಾಧಿಸಬೇಕೆಂದು ನಿರ್ಧರಿಸಿದರೆ ಆಗುವವರೆಗೆ ವಿರಮಿಸಲ್ಲ. ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ವಾಭಿಮಾನಿಗಳು ಬಳಗ ಸೇರುತ್ತಿದ್ದಾರೆ. ಹೋದ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಎರಡು ಚುನಾವಣೆಗಳನ್ನು ಗಮನಿಸಿದರೆ ಅಹಿಂದ ವರ್ಗವು
ಜಾಗೃತಿಯಾಗುತ್ತಿದೆ ಎಂಬುದು ಕಂಡುಬರುತ್ತಿದ್ದು, ಇದು ಉತ್ತಮ ಬೆಳವಣಿಗೆ ಎಂದು ವ್ಯಾಖ್ಯಾನಿಸಿದರು.
ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯರು ಅಹಿಂದ ನಾಯಕರು. ಆದ್ರೆ, ಅವರ ನಂತರ ಯಾರು ಎಂಬ ಪ್ರಶ್ನೆ ಅಹಿಂದ ವರ್ಗದಲ್ಲಿ ಕಾಡಲಾರಂಭಿಸಿದೆ. ಹಾಗಾಗಿ, ಮೂರನೇ ಶಕ್ತಿಯ ಅಗತ್ಯತೆ ತುರ್ತು ಇದ್ದು, ಅಹಿಂದ ವರ್ಗವು ಈ ನಿಟ್ಟಿನಲ್ಲಿ
ಜಾಗೃತಿಯಾಗುತ್ತಿದೆ ಎಂಬುದು ನನ್ನ ಭಾವನೆ. ಕೇವಲ ಅಹಿಂದ ವರ್ಗ ಮಾತ್ರವಲ್ಲ, ವಿದ್ಯಾರ್ಥಿಗಳು, ರೈತರು, ಸ್ವಾಭಿಮಾನಿಗಳು ಸೇರಿದಂತೆ ಯಾರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆಯೋ ಅಲ್ಲಿ ಸ್ವಾಭಿಮಾನಿ ಬಳಗ ಇರಲಿದೆ ಎಂದು ತಿಳಿಸಿದರು.
ಇನ್ನು ಮೂರು ವರ್ಷಗಳ ಕಾಲ ಯಾವುದೇ ಪಕ್ಷ ಸೇರುವ ಆಲೋಚನೆ ಸದ್ಯಕ್ಕಿಲ್ಲ. ನನ್ನ ಮುಂದೆ ಸ್ಪಷ್ಟವಾದ ಗುರಿ ಇದೆ. ಸ್ವಾಭಿಮಾನಿ ಬಳಗ ಗಟ್ಟಿಗೊಳಿಸಬೇಕು. ರಾಜಕೀಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು
ತಿಳಿಸಿದರು.
ನೀವು ಬಿಜೆಪಿಯಿಂದ ಪಕ್ಷಕ್ಕೆ ಆಹ್ವಾನ ಬಂದರೆ ಸೇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣ ನಿಂತ ನೀರಲ್ಲ. ಈಗಲೇ ಹೇಳಲು ಆಗದು. ಆಗಿನ ಪರಿಸ್ಥಿತಿ ಹಾಗೂ ಸ್ವಾಭಿಮಾನಿ ಬಳಗದವರ ಅಭಿಪ್ರಾಯ ಸಂಗ್ರಹಿಸಿ ಅಂತಿಮ
ನಿರ್ಧಾರಕ್ಕೆ ಬರಲಾಗುವುದು. ಪ್ರಾಯೋಗಿಕವಾಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆ ಇದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಳಗದ ಉಪಾಧ್ಯಕ್ಷ ಶಿವಕುಮಾರ್ ಡಿ. ಶೆಟ್ಟರ್, ಕೆ. ಶಿವಕುಮಾರ್, ಡಿ. ವಿರೂಪಾಕ್ಷಪ್ಪ ಪಂಡಿತ್, ಪುರಂದರ ಲೋಕಿಕೆರೆ ಮತ್ತಿತರರು ಹಾಜರಿದ್ದರು.