SUDDIKSHANA KANNADA NEWS/ DAVANAGERE/ DATE:14-02-2025
ದಾವಣಗೆರೆ: ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆ ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿಯು ಅಹ್ಮದ್ ನಗರ ವೃತ್ತದಲ್ಲಿ ಬಿಲ್ ಪ್ರತಿ ಹರಿದು ಸುಡುವ ಮೂಲಕ ಪ್ರತಿಭಟಿಸಿತು.
ಎಸ್ ಡಿಪಿಐ ಜಿಲ್ಲಾ ಉಪಾಧ್ಯಕ್ಷದ ರಜ್ವಿ ರಿಯಾಜ್ ಅಹಮದ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಜ್ವಿ ರಿಯಾಝ್ ಅಹಮದ್ ಮಾತನಾಡಿ ಮಸೂದೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ ಈ ಮಸೂದೆ ಅಸಾಂವಿಧಾನಿಕ ಮಾತ್ರವಲ್ಲದೇ ವಕ್ಫ್ ಸಂಪತ್ತನ್ನು ಕಳಿಸುವ ಕೋಮುವಾದಿ ಸರ್ಕಾರದ ಹುನ್ನಾರ ಆಗಿದೆ. ಜಿಲ್ಲಾಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರ ನೀಡುವುದು ಸಂಪೂರ್ಣವಾಗಿ ಅನ್ಯಾಯಕರ ಮತ್ತು ಸಂವಿಧಾನ ವಿರೋಧಿ ಎಂದರು.
ಈ ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ, ದೇಶದಾದ್ಯಂತ ಸಿಎಎ, ಎನ್ ಆರ್ ಸಿ ಮಾದರಿಯಲ್ಲಿ ಭಾರೀ ಪ್ರತಿಭಟನೆಗಳು ನಡೆಯಲಿವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭಾರತದ ಮುಸ್ಲಿಂ ಸಮುದಾಯದ ಸಂವಿಧಾನಿಕ ಹಕ್ಕುಗಳು ಮತ್ತು ವಕ್ಫ್ ಆಸ್ತಿಗಳ ರಕ್ಷಿಸುವ ಬಗ್ಗೆ ಅಲ್ಲ, ನರೇಂದ್ರ ಮೋದಿ ಸರ್ಕಾರ ಈ ಮಸೂದೆಯ ಮೂಲಕ ವಕ್ಫ್ ಬೋರ್ಡ್ ಮೇಲೆ ಹಿಂದುತ್ವ ಆದರ್ಶಗಳನ್ನು ಬಲಾತ್ಕಾರವಾಗಿ ಹೇರಲು
ಯತ್ನಿಸುತ್ತಿದೆ. ಇದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗೆ ವಿರುದ್ಧವಾದದ್ದು ಎಂದು ಅಭಿಪ್ರಾಯಪಟ್ಟರು.
ವಕ್ಫ್ ಕಾಯ್ದೆಯ ಅನುಷ್ಠಾನವನ್ನು ಬಿಜೆಪಿ ತನ್ನ ಬಹುಮತದ ಬಲದಿಂದ ದುರುಪಯೋಗಪಡಿಸಿಕೊಂಡು ದೇಶವನ್ನು ಕೇಸರಿ ಬಣ್ಣದಿಂದ ಮುಚ್ಚಲು ಪ್ರಯತ್ನಿಸುತ್ತಿದೆ. ಈ ಮಸೂದೆ ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ನೇರ ದಾಳಿ, ಹಾಗೆಯೇ ವಕ್ಫ್ ಸಂಸ್ಥೆಗಳ ಶಕ್ತಿಯನ್ನು ಕುಂದಿಸುತ್ತಿವೆ. ಈಗಿನ ಕಾನೂನುಗಳು ಹಿಂದೂ ಧಾರ್ಮಿಕ ಆಸ್ತಿಗಳನ್ನು ಹಿಂದೂ ಅಲ್ಲದವರಿಂದ ನಿರ್ವಹಿಸುವಂತಾಗಲು ನಿರ್ಬಂಧಿಸುತ್ತವೆ. ಆದರೆ ಹೊಸ ವಕ್ಫ್ ಮಸೂದೆಯಡಿಯಲ್ಲಿ, ವಕ್ಫ್ ಬೋರ್ಡ್ ಸದಸ್ಯರ ಬಹುಪಾಲು, ಸಿಇಒ ಸಹ ಮುಸ್ಲಿಮ್ ಆಗಿರುವ ಅವಶ್ಯಕತೆ ಇಲ್ಲ. ಇದು ವಕ್ಫ್ ಆಡಳಿತವನ್ನು ಕಬಳಿಸಲು ಮಾಡಿದ ಸಂಚು ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಯಾಹಿಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಆರ್. ತಾಹೀರ್, ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಕಾರ್ಯದರ್ಶಿಗಳಾದ ಮಹಮ್ಮದ್ ಮೋಹಸಿನ್ ಮತ್ತು ಮಹಮ್ಮದ್ ಜುನೈದ್, ಜಿಲ್ಲಾ ಸಮಿತಿ ಸದಸ್ಯರಾದ ರೆಹಮಾನ್ ಸಾಬ್, ಝಬಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಏಜಾಜ್ ಅಹಮದ್, ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಸಮಿಉಲ್ಲಾ ಮುಜಾವರ್ ಇತರರು ಉಪಸ್ಥಿತರಿದ್ದರು.