SUDDIKSHANA KANNADA NEWS/ DAVANAGERE/ DATE:10-12-2024
ದಾವಣಗೆರೆ: ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಯುವ ರಾಜಕಾರಣಿಗಳಿಗೆ ಮಾದರಿ. ಆಡಳಿತ ವೈಖರಿ, ವಹಿಸಿದ ಜವಾಬ್ದಾರಿ ನಿರ್ವಹಿಸುವ ರೀತಿ ಎಲ್ಲಾ ಪಕ್ಷದವರೂ ಪಕ್ಷಬೇಧ ಮರೆತು ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಈ ದೇಶ ಕಂಡ ಅದ್ವಿತೀಯ ನಾಯಕ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸಂತಾಪ ಸೂಚಿಸಿದ್ದಾರೆ.
ಎಸ್. ಎಂ. ಕೃಷ್ಣ ಅವರು ಎಂದಿಗೂ ದ್ವೇಷದ ರಾಜಕಾರಣ ಮಾಡಿದವರಲ್ಲ, ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಶ್ರಮಿಸಿದವರು. ಐಟಿಬಿಟಿ ಇಷ್ಟೊಂದು ವೇಗದಲ್ಲಿ ಬೆಳೆಯಲು ಪ್ರಮುಖ ಕಾರಣ ಎಸ್. ಎಂ. ಕೃಷ್ಣರ ದೂರದೃಷ್ಟಿತ್ವವೇ ಕಾರಣ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸಲ್ಲಿಸಿರುವ ಸೇವೆ ಅನನ್ಯ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುವ ರಾಜಕಾರಣಿಗಳಿಗೆ ಎಸ್. ಎಂ. ಕೃಷ್ಣರ ರಾಜಕೀಯ, ವ್ಯಕ್ತಿತ್ವ, ನೇರ ನುಡಿ, ನಡೆ, ಎಲ್ಲಾ ಪಕ್ಷದವರನ್ನೂ ಗೌರವಿಸುವ ಪರಿ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಸೆಳೆಯುತಿತ್ತು. ಪಾರದರ್ಶಕ ಆಡಳಿತ, ದಕ್ಷ ಆಡಳಿತಗಾರ, ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ಜಾರಿಗೊಳಿಸಿದ ಧೀಮತ ನಾಯಕರು. ಅವರ ಆದರ್ಶ, ನಡೆಸಿದ ಜೀವನ ಎಲ್ಲರಿಗೂ ಆದರ್ಶಮಯ ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.