SUDDIKSHANA KANNADA NEWS/ DAVANAGERE/ DATE:01-02-2025
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಕೇಂದ್ರ ಸರ್ಕಾರದ 2025ನೇ ಸಾಲಿನ ಬಜೆಟ್ ಮೂಗಿಗೆ ತುಪ್ಪ ಸವರುವ ಬಜೆಟ್ ಆಗಿದೆ. ಕರ್ನಾಟಕದ ಪಾಲಿಗೆ ನಿರಾಶದಾಯಕ ಆಯವ್ಯಯ ಎಂದು ಅಖಿಲ ಭಾರತ ರಾಷ್ಚ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.
ಆಯವ್ಯಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕರ್ನಾಟಕಕ್ಕೆ ಕೇವಲ ಒಂದೇ ಒಂದು ಯೋಜನೆ ಘೋಷಿಸಿದ್ದು ಬಿಟ್ಟರೆ ಯಾವ ಸೌಲಭ್ಯವನ್ನೂ ನೀಡಿಲ್ಲ. ನೀರಾವರಿ, ಶಿಕ್ಷಣ, ಹೊಸ ಕಾರ್ಯಕ್ರಮ ನೀಡದೇ ಮಲತಾಯಿ ಧೋರಣೆ ಅನುಸರಿಸಿರುವುದು ಗೊತ್ತಾಗುತ್ತದೆ. ಕರ್ನಾಟಕ ಸರ್ಕಾರ ಮನವಿ ಮಾಡಿಕೊಂಡಿದ್ದ ಒಂದೂ ಬೇಡಿಕೆ ಈಡೇರಿಸದೇ ಇರುವುದು ವಿಪರ್ಯಾಸ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಟ್ಯಾಕ್ಸ್ ವಿನಾಯಿತಿ ನೀಡಲಾಗಿದೆ. 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ರೈತರ ಸಾಲ ಮನ್ನಾ ಮಾಡಬೇಕು. ವೈಜ್ಞಾನಿಕ ದರ ನಿಗದಿಪಡಿಸಬೇಕು. ಇಂಥ ವಿಚಾರಗಳ ಬಗ್ಗೆ ಗಮನವನ್ನೇ ಹರಿಸಿಲ್ಲ ಎಂದು ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ 4500 ಕೋಟಿ ರೂಪಾಯಿ ನೀಡುವುದಾಗಿ ಹೇಳಿ, ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದ ಕೇಂದ್ರ ಸರ್ಕಾರವು ಇದುವರೆಗೆ ಕ್ರಮ ಕೈಗೊಂಡಿಲ್ಲ. ಈಗ ಹಲವು ಘೋಷಣೆಗಳನ್ನು ಮಾಡಲಾಗಿದೆ. ಈ ಹಿಂದೆ ಕರ್ನಾಟಕದ ವಿಚಾರಕ್ಕೆ ಸಂಬಂಧಿಸಿದಂತೆ ಘೋಷಿಸಿದ್ದೇ ಜಾರಿಯಾಗಿಲ್ಲ. ಉಳಿದ ಯೋಜನೆಗಳು ಘೋಷಣೆಗಳಿಗಷ್ಟೇ ಸೀಮಿತವಾಗಿತ್ತು. ಈ ಬಜೆಟ್ ನಲ್ಲಿಯೂ ರೈತರ ಜೀವನ ಸುಧಾರಣೆ, ಮಹಿಳೆಯರಿಗೆ ಹೆಚ್ಚಿನ ಶಕ್ತಿ, ಮಧ್ಯಮವರ್ಗದವರ ಹಿತ ಕಾಪಾಡುವ ವಿಶೇಷ ಕಾರ್ಯಕ್ರಮಗಳ ಬೆಳಕು ಚೆಲ್ಲಿಲ್ಲ ಎಂದು ಸೈಯದ್ ಖಾಲಿದ್ ಅಹ್ಮದ್ ತಿಳಿಸಿದ್ದಾರೆ.