SUDDIKSHANA KANNADA NEWS/ DAVANAGERE/ DATE:23-11-2024
ಬೆಂಗಳೂರು: ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಮ್ಮ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಎನ್ ಡಿ ಎ ಅಭ್ಯರ್ಥಿ ಬಂಗಾರು ಹನುಮಂತು ಹೀನಾಯ ಸೋಲು ಅನುಭವಿಸಿದ್ದಾರೆ. ಈ ಮೂಲಕ ಶಾಸಕ ಜನಾರ್ದನ ರೆಡ್ಡಿ ಮತ್ತೆ ಚುನಾವಣೆ ಅಖಾಡಕ್ಕೆ ಇಳಿದರೂ ತುಕರಾಂ ಪತ್ನಿ ಅನ್ನಪೂರ್ಣಮ್ಮ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಸಂಡೂರಿನಲ್ಲಿ ಕಮಲ ಅರಳದಂತೆ ಮಾಡಿದ್ದಾರೆ. ಸಂಡೂರು ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂಬುದು ಸಾಬೀತಾಗಿದೆ.
ಸೋಲಿನ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು, ಸೋಲಿನ ಹೊಣೆ ನಾನೇ ಹೊತ್ತುಕೊಳ್ಳುತ್ತೇನೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಎಲ್ಲಾ ನಾಯಕರಿಗೂ ಧನ್ಯವಾದ ಅರ್ಪಿಸುತ್ತೇನೆ. ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ನಾನು ಪಕ್ಷದವರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಂಗಾರು ಹನುಮಂತು ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ. ಚುನಾವಣೆಯಲ್ಲಿ ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ಆದ್ರೆ, ಗೆಲ್ಲಲು ಸಾಧ್ಯವಾಗಲಿಲ್ಲ. ಸಿಎಂ ಸಿದ್ದರಾಮಯ್ಯ, ಸಚಿವರು ಸೇರಿದಂತೆ ಘಟಾನುಘಟಿಗಳು ಬಂದು ಪ್ರಚಾರ ಮಾಡಿದರು. ಹಣದ ಹೊಳೆಯನ್ನೇ ಹರಿಸಿದ್ದಾರೆ. ಶಿವರಾಜ್ ತಂಗಡಗಿ ಅವರೇ ಬಂದಿದ್ದರು. ಸಿಕ್ಕಾಪಟ್ಟೆ ಹಣ ಖರ್ಚು ಮಾಡಿದರು. ಹಣದ ಹೊಳೆಯನ್ನೇ ಹರಿಸಿದ್ದರಿಂದ ಕಾಂಗ್ರೆಸ್ ಗೆದ್ದಿದೆ. ಇಲ್ಲದಿದ್ದರೆ ನಾನೇ ಗೆಲ್ಲುತ್ತಿದೆ ಎಂದು ಹೇಳಿದರು.