SUDDIKSHANA KANNADA NEWS/ DAVANAGERE/ DATE:19-10-2023
ದಾವಣಗೆರೆ (Davanagere): ಕಡ್ಡಾಯವಾಗಿ ಪ್ರಥಮ ಭಾಷೆ ಕನ್ನಡ ಪದ ಒಳಗೊಂಡಿರುವ ನಾಮಫಲಕಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಯ ಅಡಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಅಳವಡಿಸದಿದ್ದರೆ ಪಾಲಿಕೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ರಾಜಾಧ್ಯಕ್ಷ ವಿ.ಅವಿನಾಶ್ ಎಚ್ಚರಿಕೆ ನೀಡಿದರು.
READ ALSO THIS STORY:
Davanagere: ವಿದ್ಯುತ್ ತಾರತಮ್ಯ ನೀತಿಗೆ ಸಿಡಿದೆದ್ದ ರೈತರು: ಕೃಷಿ ಪಂಪ್ ಸೆಟ್ ಗಳಿಗೆ ಏಳು ತಾಸು ಕರೆಂಟ್ ನೀಡುವಂತೆ ಒತ್ತಾಯಿಸಿದ ಅನ್ನದಾತರು….!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ ವ್ಯಾಪ್ತಿಯ ರಾಜ ಬೀದಿಗಳಲ್ಲಿ ವಾಣಿಜ್ಯ ಮಳಿಗೆಗಳ ಮುಂದೆ, ಕನ್ನಡೇತರ ಭಾಷ ನಾಮಫಲಕವು ತಲೆಯೆತ್ತಿ ರಾರಾಜಿಸುತ್ತಿದ್ದು, ಈ ವಿಚಾರವಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಮೌನ ವಹಿಸಿರುವುದರ ಕಾರಣ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಆಂಗ್ಲ ನಾಮಫಲಕ ತೆರವುಗೊಳಿಸುವುದಲ್ಲದೇ, ಮಸಿ ಬಳಿಯುವ ಕೆಲಸಕ್ಕೆ ಮುಂದಾಗಲಿದೆ ಎಂದರು.
ರಾಜ್ಯದಲ್ಲಿ ಕನ್ನಡ ಭಾಷೆ ಸಾರ್ವಭೌಮತ್ವ ಮತ್ತು ರಾಜ್ಯ ಸರ್ಕಾರದ ಆಡಳಿತದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಕೊಟ್ಟು ರಾಜ್ಯ ಸರ್ಕಾರ ಕನ್ನಡ ಭಾಷೆ ಬಳಕೆಯಾಗಬೇಕೆಂದು ಅನುಷ್ಟಾನಗೊಳಿಸಿ ಆದೇಶ ಹೊರಡಿಸಿತ್ತು. ಕನ್ನಡಿಗರ ಹಿತಾಸಕ್ತಿಗೆ ಕಾನೂನನ್ವಯ ಕನ್ನಡ ಭಾಷೆಯನ್ನು ಸಕ್ರಿಯಗೊಳಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರದಡಿಯಲ್ಲಿ ಬರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜುಲೈ 2013 ರಂದು ಕನ್ನಡ ನಾಮಫಲಕ ಕಡ್ಡಾಯ ಮಾಡಿದೆ ಎಂದು ಹೇಳಿದರು.
ರಾಜ್ಯದಲ್ಲಿನ ವಾಣಿಜ್ಯ ಮಳಿಗೆಗಳಲ್ಲಿ ನಾಮಫಲಕಗಳು ಶೇ.60ರಷ್ಟು ಕನ್ನಡ ಮತ್ತು 40 ಕನ್ನಡೇತರ ಭಾಷೆಗಳನ್ನು ಒಳಗೊಂಡಿರಬೇಕು. ಅದರ ಪ್ರಕಾರ ದಾವಣಗೆರೆ ಮಹಾನಗರ ಪಾಲಿಕೆ ಅಡಿಯಲ್ಲಿರುವ ವಾಣಿಜ್ಯ ಮಳಿಗೆಗಳು ಮತ್ತು ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡೇತರ ಭಾಷೆಗಳ ನಾಮಫಲಕಗಳು ಹೆಚ್ಚಾಗಿ ಕಂಡುಬರುತ್ತವೆ. ಆದ ಕಾರಣ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಈ ಕೂಡಲೇ ಕನ್ನಡೇತರ ಭಾಷೆ ನಾಮಫಲಕ ಹೊಂದಿರುವ ಅಂಗಡಿ ಮುಂಗಟ್ಟುಗಳ ಪರವಾನಿಗೆ ರದ್ದುಪಡಿಸಬೇಕು ಎಂದು ತಿಳಿಸಿದರು.
ಈ ಕುರಿತು ಅಕ್ಟೋಬರ್ 31ರೊಳಗೆ ನೋಟೀಸ್ ಜಾರಿ ಮಾಡಿ ಕನ್ನಡೇತರ ಭಾಷೆ ಒಳಗೊಂಡಿರುವ ನಾಮ ಫಲಕಗಳನ್ನು ತೆರವುಗೊಳಿಸದಿದ್ದರೆ ನವೆಂಬರ್ 1ರಂದು ಬೆಳಿಗ್ಗೆ 11.30ಕ್ಕೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಪಿ.ಬಿ.ರಸ್ತೆಯ ಜಿಲ್ಲಾಧಿಕಾರಿ ಕಚೇರಿ ಸಮೀಪದಿಂದ ಕನ್ನಡೇತರ ನಾಮಫಲಕಗಳಗೆ ಕಪ್ಪು ಮಸಿ ಬಳಿಯುವ ಜೊತೆಗೆ ನಾಮ ಫಲಕ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಮಾಲಾ ನಾಗರಾಜ್, ಡಿ.ಜೆ.ರಾಜೇಂದ್ರ, ರಾಜು ಆನೆಕೊಂಡ, ರಮೇಶ್ ಬಿ.ನಾಯ್ಕ, ಜೆ.ಜಗದೀಶ್, ಎನ್.ಎಸ್.ಈರಣ್ಣ, ನಟರಾಜ, ಅನಂದ ಇಟ್ಟಿಗುಡಿ ಇತರರು ಇದ್ದರು.