SUDDIKSHANA KANNADA NEWS/ DAVANAGERE/ DATE-07-05-2025
ಬೆಂಗಳೂರು: ದೇಶದ ಸೇನಾಪಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದ್ದಾರೆ. ದೇಶದ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಈ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಸರ್ಕಾರ ನೂರಕ್ಕೆ
ನೂರರಷ್ಟು ಸೇನೆ ಕೈಗೊಂಡಿರುವ ಕ್ರಮವನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿದೆ. ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಅಮಾಯಕ ಜನರ ಸಾವು ನೋವು ತಪ್ಪಿಸಿದ್ದಾರೆ. ನಮ್ಮ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ. ಈ ದಾಳಿಯನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಕಾಶ್ಮೀರದ ಪಹಲ್ಗಾಂವ್ನಲ್ಲಿ ಅಮಾಯಕ 26ಜನ ಹತ್ಯೆ ನಡೆಸಿದ ಉಗ್ರರನ್ನು ಬೆಂಬಲಿಸುವವರು, ಸಾಕುವವರು ಸಹ ಪಾಕಿಸ್ತಾನದವರೇ ಎಂಬುವುದು ಸ್ಪಷ್ಟವಾಗಿದೆ. ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದೇವೆ. ರಾಜ್ಯದಲ್ಲಿ ಸುರಕ್ಷತೆಯ ಕುರಿತು ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಉಗ್ರರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಸಂವಿಧಾನ ಉಳಿಸಿ ಅಡಿಯಲ್ಲಿ ರಾಯಚೂರಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮನ್ನು ರದ್ದುಗೊಳಿಸಲಾಗಿದೆ.