SUDDIKSHANA KANNADA NEWS/ DAVANAGERE/ DATE:27-02-2024
ದಾವಣಗೆರೆ: ಮಾದಕ ವಸ್ತುಗಳ ಮಾರಾಟ ಮತ್ತು ಕಳ್ಳ ಸಾಗಣೆಯನ್ನು ಬೇರು ಸಮೇತ ಕಿತ್ತೊಗೆಯಲು ಪೊಲೀಸ್, ಅಬಕಾರಿ ಸಿಬ್ಬಂದಿಯವರು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಾರ್ಕೋಟಿಕ್ಸ್ ತಡೆ ಸಮನ್ವಯ ಸಮಿತಿ ಅಧ್ಯಕ್ಷ ಡಾ. ವೆಂಕಟೇಶ್ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ವಸ್ತು ಮಾರಾಟ, ಸಾಗಣೆ ತಡೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾದಕ ವಸ್ತುಗಳು ಯುವ ಜನರ ಭವಿಷ್ಯದ ಜೊತೆಗೆ ಮಾನವ ಸಂಪತ್ತನ್ನು ನಾಶ ಮಾಡುವ ವಸ್ತುಗಳಾಗಿವೆ. ಯಾವುದೇ ಕಾರಣಕ್ಕೂ ಇಂತಹ ಮಾದಕ ವಸ್ತುಗಳ ಮಾರಾಟದ ಜಾಲ ಮತ್ತು ಕಳ್ಳ ಸಾಗಣೆ ಮಾಡುವುದನ್ನು ತಡೆಗಟ್ಟಬೇಕು. ಮಾದಕ ವಸ್ತುಗಳಿಗೆ ಪ್ರೋತ್ಸಾಹ, ಮಾರಾಟ ಮಾಡುವ ಜಾಲವನ್ನು ಬೇರು ಸಮೇತ ಕಿತ್ತೆಸೆಯಬೇಕೆಂದು ಸೂಚನೆ ನೀಡಿದರು.
ಕಳೆದ 2011 ರಿಂದ 2024 ರ ಫೆಬ್ರವರಿ 26 ರ ವರೆಗೆ 230 ಪ್ರಕರಣಗಳನ್ನು ಎನ್.ಡಿ.ಪಿ.ಎಸ್.ರಡಿ ದಾಖಲಿಸಲಾಗಿದೆ. ಆದರೆ 2023 ರಲ್ಲಿ 90 ಪ್ರಕರಣಗಳು ವರದಿಯಾಗಿವೆ. 2024 ರಲ್ಲಿ ಎರಡು ತಿಂಗಳಲ್ಲಿ 21 ಪ್ರಕರಣಗಳು ದಾಖಲಾಗಿದ್ದು ಮಾದಕ ವಸ್ತುಗಳ ಮಾರಾಟ, ಸಾಗಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಇಲ್ಲಿಯವರೆಗಿನ 230 ಪ್ರಕರಣಗಳಲ್ಲಿ 32 ತನಿಖೆ ಹಂತದಲ್ಲಿವೆ, 141 ನ್ಯಾಯಾಲಯದಲ್ಲಿ ವಿಚಾರಣೆ ಹಂತ, 35 ರಲ್ಲಿ ಶಿಕ್ಷೆಯಾಗಿದ್ದು 20 ಬಿಡುಗಡೆಯಾಗಿವೆ. 2024 ರ ಜನವರಿ ಮತ್ತು ಫೆಬ್ರವರಿ 24 ರ ವರೆಗೆ ವರದಿಯಾದ ಪ್ರಕರಣಗಳಲ್ಲಿ ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ 5, ಕೆಟಿಜೆ ನಗರ ಠಾಣೆ ವ್ಯಾಪ್ತಿಯಲ್ಲಿ 3, ಸಿಇಎನ್ 3, ನ್ಯಾಮತಿ 2, ಹೊನ್ನಾಳಿ 1, ಹರಿಹರ 1, ಜಗಳೂರು 1, ವಿದ್ಯಾನಗರ, ಬಡಾವಣೆ ತಲಾ 1 ಪ್ರಕರಣಗಳು ದಾಖಲಾಗಿವೆ. 3 ಮಾರಾಟಗಾರರ ಮೇಲೆ ಪ್ರಕರಣ ದಾಖಲಾಗಿದ್ದು ಚನ್ನಗಿರಿ 1 ರಲ್ಲಿ ಹಸಿ ಗಾಂಜಾ, ಆಜಾದ್ ನಗರ 349 ಗ್ರಾಂ ಒಣಗಾಂಜಾ, ಹರಿಹರ ಗ್ರಾಮಾಂತರ 200 ಗ್ರಾಂ ಒಣಗಾಂಜಾ ಪ್ರಕರಣ ದಾಖಲಿಸಿ 3 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಸಭೆ ಮಾಹಿತಿ ನೀಡಿದರು.
ಅಬಕಾರಿ ಇಲಾಖೆಯಿಂದಲೂ ಮಾದಕ ವಸ್ತುಗಳ ಮಾರಾಟ, ಸಾಗಣೆ ಬಗ್ಗೆ ನಿಗಾವಹಿಸಲಾಗಿದ್ದು 6 ಪ್ರಕರಣಗಳಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು 6 ರಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವು ಸಾಸ್ವೇಹಳ್ಳಿ, ದಾವಣಗೆರೆ ಬನಶಂಕರಿ ಬಡಾವಣೆ, ಬೂದಿಹಾಳ್ ರಸ್ತೆ ಮುಭಾರಕ್ ಪ್ಯಾಲೇಸ್ ಮುಂಭಾಗ, ಬಿ.ಕಲ್ಪನಹಳ್ಳಿ ವೃತ್ತದ ಹತ್ತಿರ, ಆನಗೋಡು ಪಾರ್ಕ್ ಸರ್ವೀಸ್ ರಸ್ತೆ, ದೇವರಾಜ್ ಅರಸ್ ಸಿ ಬ್ಯಾಕ್, ಚನ್ನಗಿರಿ ತಾಲ್ಲೂಕು ಕಚೇರಿ ಹತ್ತಿರ, ಬೇತೂರು ರಸ್ತೆ ದೊಡ್ಡಹಳ್ಳ ಸೇತುವೆ, ಹೊನ್ನಾಳಿ ಮಾರಿಕೊಪ್ಪ-ಬಾರ್ಲೈನ್ ಕೂಡು ರಸ್ತೆ, ಹೊನ್ನಾಳಿ ತುಂಗಭದ್ರಾ ಬಡಾವಣೆ, ದಾವಣಗೆರೆ ಆಂಜನೇಯ ಬಡಾವಣೆಯಲ್ಲಿ ವರದಿಯಾಗಿವೆ. ಇವು ಮಾದಕ ವಸ್ತುಗಳ ಸೇವನೆ, ಗಾಂಜಾ ಪತ್ತೆ ಪ್ರಕರಣಗಳಾಗಿವೆ ಎಂದು ವಿವರಿಸಿದರು.
ಜಾಗೃತಿ ತೀವ್ರಗೊಳಿಸಲು ಸೂಚನೆ; ಯುವ ಜನರಲ್ಲಿ ಮಾದಕ ವಸ್ತುಗಳ ವ್ಯಾಮೋಹ ಹೆಚ್ಚಿರುತ್ತದೆ. ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಅದರಲ್ಲೂ ಇಂಜಿನಿಯರಿಂಗ್, ವೈದ್ಯಕೀಯ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವಿರುದ್ದ ಜಾಗೃತರನ್ನಾಗಿ ಮಾಡಲು ಜಾಥಾ, ವಿಚಾರ ಸಂಕಿರಣ, ಪ್ರಬಂಧ ಸ್ಪರ್ಧೆಗಳನ್ನು ಹೆಚ್ಚು ಹೆಚ್ಚು ಮಾಡುವ ಮೂಲಕ ಮಾದಕ ವಸ್ತುಗಳನ್ನು ತಡೆಗಟ್ಟಿ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.