SUDDIKSHANA KANNADA NEWS/ DAVANAGERE/ DATE:24-10-2024
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊರತೆ ಇದೆ. ಹಾಗಾಗಿ, ಇನ್ನೂ 450 ಪೌರ ಕಾರ್ಮಿಕರ ನೇಮಕ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬಳಿಗೆ ಸದ್ಯದಲ್ಲಿಯೇ ನಿಯೋಗ ತೆರಳಲಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ತಿಳಿಸಿದರು.
ಪಾಲಿಕೆಯ ಮೇಯರ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗುವುದು. ಎಲ್ಲಾ ವಾರ್ಡ್ ಗಳಿಗೂ ಭೇಟಿ ನೀಡಲಾಗುತ್ತಿದೆ. ಆಯುಕ್ತರು, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಗುತ್ತಿದೆ. ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಚರಂಡಿ, ರಸ್ತೆ ಸೇರಿದಂತೆ ಸ್ವಚ್ಛತೆಗೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳನ್ನು ಸ್ವಚ್ಛತಾ ಮಾಸವನ್ನಾಗಿ ಆಚರಿಸಲಾಗುವುದು. ಆದ್ದರಿಂದ ಎಲ್ಲಾ ವಾರ್ಡ್ ಗಳಲ್ಲಿ ಸ್ವಚ್ಛತೆ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ಇದಕ್ಕೆ ಬೇಕಾಗುವ ಸಲಕರಣೆಗಳು, ವಾಹನಗಳು ಮತ್ತು ಮಾನವ ಸಂಪನ್ಮೂಲವನ್ನು ಹೆಚ್ಚುವರಿಯಾಗಿ ತೆಗೆದುಕೊಂಡು ಎಲ್ಲಾ ವಾರ್ಡ್ ಗಳಲ್ಲಿಯೂ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಪಾಲಿಕೆ ವ್ಯಾಪ್ಕಿಯಲ್ಲಿನ ಎಲ್ಲಾ ಆಸ್ತಿ ಮಾಲೀಕರು ಆಸ್ತಿ ತೆರಿಗೆ, ನೀರಿನ ತೆರಿಗೆ, ಯುಜಿಡಿ ಶುಲ್ಕ, ಉದ್ದಿಮ ಪರವಾನಿಗೆ ಶುಲ್ಕವನ್ನು ಮಹಾನಗರ ಪಾಲಿಕೆಗೆ ಪಾವಿತಸಬೇಕು. ಒಂದು ವೇಳೆ ಪಾವತಿಸದಿದ್ದರೆ ಅಧಿಕಾರಿಗಳೇ ಭೇಟಿ ನೀಡಿ ಸ್ಥಳದಲ್ಲಿಯೇ ದಂಡದೊಂದಿಗೆ ತೆರಿಗೆ ಇಲ್ಲವೇ ಶುಲ್ಕ ವಸೂಲಿಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಆಯುಕ್ತೆ ರೇಣುಕಾ, ಉಪಮೇಯರ್ ಸೋಗಿ ಶಾಂತಕುಮಾರ್ ಹಾಜರಿದ್ದರು.