SUDDIKSHANA KANNADA NEWS/ DAVANAGERE/ DATE-03-06-2025
ಅಹಮದಾಬಾದ್: ಪಂಜಾಬ್ ವಿರುದ್ಧ ನಡೆದ ಐಪಿಎಲ್ ಟಿ-20 18ನೇ ಆವೃತ್ತಿಯಲ್ಲಿ ಆರ್ ಸಿ ಬಿ ಗೆಲ್ಲುವ ಮೂಲಕ 18 ವರ್ಷಗಳ ಕನಸು ಸಾಕಾರಗೊಳಿಸಿಕೊಂಡಿದೆ. ಈ ಮೂಲಕ ಮೊದಲ ಬಾರಿಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಪಂಜಾಬ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ 6 ರನ್ ಗಳಿಂದ ಜಯಭೇರಿ ಬಾರಿಸಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಸಂಭ್ರಮಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಆರಂಭಿಕ ಉತ್ತಮ ಆಗಿರಲಿಲ್ಲ. ಫಿಲ್ ಸಾಲ್ಟ್ ಕೇವಲ 16 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿದರೂ 43 ರನ್ ಗಳಿಸಿ ಔಟ್ ಆದರು. ಈ ರನ್ ಗಳಿಸಲು 35 ಬಾಲ್ ಗಳನ್ನು ತೆಗೆದುಕೊಂಡರು.
ಮಯಾಂಕ್ ಅಗರ್ ವಾಲ್ ಸಹ ಹೆಚ್ಚು ರನ್ ಗಳಿಸಲಿಲ್ಲ. 18 ಎಸೆತಗಳಲ್ಲಿ 24 ರನ್ ಗಳಿಸಿ ಔಟ್ ಆದರು. ರಜತ್ ಪಡಿದಾರ್ 26, ಲಿಯಾಮ್ ಲಿವಿಂಗ್ ಸ್ಟನ್ 25 ರನ್ ಗಳಿಸಿದರೆ, ಜಿತೇಶ್ ಶರ್ಮಾ ಅಬ್ಬರಿಸಿದರಾದರೂ 10 ಎಸೆತಗಳಲ್ಲಿ ಎರಡು ಬೌಂಡರಿ, ಎರಡು ಸಿಕ್ಸರ್ ಬಾರಿಸಿ ರಂಜಿಸಿದರು. ಶೆಪರ್ಡ್ 17 ರನ್ ಗಳಿಸಿದರು. 20 ಓವರ್ ಗಳಲ್ಲಿ ಅಂತಿಮವಾಗಿ ಆರ್ ಸಿಬಿ 9 ವಿಕೆಟ್ ಕಳೆದುಕೊಂಡು 190 ರನ್ ಪೇರಿಸಿತು. ಪಂಜಾಬ್ ಪರ ಹರ್ಷದೀಪ್ ಸಿಂಗ್ ದುಬಾರಿಯಾರೂ 3 ವಿಕೆಟ್ ಪಡೆದು ಮಿಂಚಿದರು. ಜಮಿಸನ್ ಸಹ ದುಬಾರಿಯಾಗಿ 48 ರನ್ ಕೊಟ್ಟು 3 ವಿಕೆಟ್ ಪಡೆದರು.
191 ರನ್ ಗಳ ಗುರಿ ಬೆನ್ನಟ್ಟಿದ ಪಂಜಾಬ್ ಉತ್ತಮ ಆರಂಭ ಪಡೆಯಿತು. ಪ್ರಿಯಾಂಕ್ ಆರ್ಯಾ 24, ಪ್ರಭಸಿಮರ್ನ್ ಸಿಂಗ್ 26 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಆರ್ ಸಿಬಿ ನಡುಗಿಸಿದ ಜೊಶ್ ಇಂಗ್ಲಾಶ್ 23 ಎಸೆತಗಳಲ್ಲಿ 39 ರನ್ ಬಾರಿಸಿ ರಂಜಿಸಿದರು. ಶ್ರೇಯಸ್ ಅಯ್ಯರ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಗೆ ಮರಳುತ್ತಿದ್ದಂತೆ ಆರ್ ಸಿಬಿ ಆಟಗಾರರು ಕುಣಿದು ಕುಪ್ಪಳಿಸಿದರು. ಆರ್ ಸಿಬಿ ಪರ 4 ಓವರ್ ಬೌಲ್ ಮಾಡಿದ ಕ್ರುನಾಲ್ ಪಾಂಡ್ಯ ನಾಲ್ಕು ಓವರ್ ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಪಡೆದರು. ಭುವನೇಶ್ವರ್ ತನ್ನ ಮೂರನೇ ಓವರ್ ನಲ್ಲಿ ವಿಕೆಟ್ ಪಡೆದು ಮಿಂಚಿದರು.
ಎರಡೂ ತಂಡಗಳು ಗೆಲುವಿಗೆ ಶ್ರಮಿಸಿದವು. ಪಂದ್ಯವು ರೋಚಕವಾಗಿತ್ತು. ಆರ್ ಸಿಬಿ ಬ್ಯಾಟಿಂಗ್ ಮಾಡುವಾಗ ಇಷ್ಟೊಂದು ರನ್ ಪೇರಿಸುತ್ತದೆ ಎಂದು ಊಹಿಸುವುದು ಕಷ್ಟವಾಗಿತ್ತು. ಮಳೆ ಬಂದ ಕಾರಣ ಬಾಲ್ ಅಂದುಕೊಂಡಂತೆ ಬ್ಯಾಟ್ಸ್ ಮನ್ ಗಳಿಗೆ ಬರುತ್ತಿರಲಿಲ್ಲ. ಆರ್ ಸಿಬಿ 190 ರನ್ ಪೇರಿಸಲು ಪರದಾಡಿತು.
ಇನ್ನು ಈ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಇಲೆವೆನ್ ಗೆಲ್ಲುವ ಸಾಧ್ಯತೆ ಇತ್ತಾದರೂ ಅಂತಿಮವಾಗಿ ಆರ್ ಸಿಬಿ ಗೆಲುವಿನ ನಗೆ ಬೀರಿತು. ಈ ಮೂಲಕ 18 ವರ್ಷಗಳ ಪ್ರಶಸ್ತಿ ಇಲ್ಲದ ಬರಗಾಲ ನಿವಾರಿಸಿಕೊಂಡು ಕುಣಿದು ಕುಪ್ಪಳಿಸಿತು.