SUDDIKSHANA KANNADA NEWS/ DAVANAGERE/ DATE:16-02-2025
ಬೆಂಗಳೂರು: ಸುಳ್ಳು ಭರವಸೆಗಳು, ಆಮಿಷಗಳನ್ನೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಾಡಿನ ಜನರಿಗೆ ದರ ಏರಿಕೆಯ ಕುಣಿಕೆಯ ಮೂಲಕ ವಸೂಲಿಗೆ ಇಳಿದಿರುವುದು ದುರಂತವೇ ಸರಿ. ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಿಲ್ಲೊಂದು ದರ ಏರಿಕೆಯ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಪ್ರಯೋಗ ಮಾಡುತ್ತಲೇ ಬಂದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಸಾರಿಗೆ ಬಸ್ ದರ, ನೀರಿನ ದರ, ಮೆಟ್ರೋ ದರ ಏರಿಸುವ ಮೂಲಕ ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿರುವಾಗಲೇ ವಿದ್ಯುತ್ ದರ ಹೆಚ್ಚಳದ ಮೂಲಕ ಜನರಿಗೆ ಗಾಯದ ಮೇಲೆ ಬರೆ ಎಳೆಯಲು ಹೊರಟಿರುವುದನ್ನು ನೋಡಿದರೆ ಈ ಸರ್ಕಾರ ‘ಬೆಲೆ ಏರಿಕೆಯ ಭಾಗ್ಯವೆಂಬ’ ಮತ್ತೊಂದು ಗ್ಯಾರಂಟಿಯನ್ನು ನಿತ್ಯವೂ ಜಾರಿಯಲ್ಲಿಡಲು ಹೊರಟಂತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಂತೂ ನಿಂತು ಹೋಗಿವೆ, ಹೊಸ ಕಾಮಗಾರಿಗಳ ಶಂಕುಸ್ಥಾಪನೆಯಂತೂ ಕನಸಿನ ಮಾತು, ಒಂದೇ ಒಂದು ಹೊಸ ಯೋಜನೆ ಜಾರಿಗೆ ತರಲಿಲ್ಲ, ಭ್ರಷ್ಟಾಚಾರ ಹಾಗೂ ಅಕ್ರಮಗಳು ನಿಲ್ಲುತ್ತಿಲ್ಲ. ಇದೀಗ ವಿದ್ಯುತ್ ದರ ಏರಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ತನ್ನ ಜನವಿರೋಧಿ ನಿಲುವು ಬದಲಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಬಿಸಿ ಎದುರಿಸಬೇಕಾದೀತು ಎಂದು ಎಚ್ಚರಿಸ ಬಯಸುತ್ತೇನೆ ಎಂದು ಎಕ್ಸ್ ಖಾತೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.