SUDDIKSHANA KANNADA NEWS/ DAVANAGERE/ DATE:22-10-2024
ದಾವಣಗೆರೆ: ಜಿಲ್ಲೆಯಾದ್ಯಂತ ವರುಣನ ರುದ್ರನರ್ತನ ಜೋರಾಗಿದೆ. ಚನ್ನಗಿರಿ, ಹೊನ್ನಾಳಿ – ನ್ಯಾಮತಿ, ದಾವಣಗೆರೆ ಸೇರಿದಂತೆ ಜಿಲ್ಲೆಯಾದ್ಯಂತ ಆರ್ಭಟವೂ ಹೆಚ್ಚಿದೆ. ರೈತಾಪಿ ವರ್ಗವಂತೂ ಹಿಡಿಶಾಪ ಹಾಕುವಂತಾಗಿದೆ. ಕಳೆದ ವರ್ಷ ಬರಗಾಲ, ಈ ವರ್ಷ ನೆರೆ ಹಾವಳಿ. ಒಟ್ಟಾರೆ ರೈತರ ಬದುಕು ಮೂರಾಬಟ್ಟೆಯಾಗಿದೆ.
ಹೊನ್ನಾಳಿ ನ್ಯಾಮತಿ ತಾಲೂಕಿನಲ್ಲಿಯೂ ವರ್ಷಧಾರೆ ಜೋರಾಗಿ ಸುರಿದಿದೆ. ಹೊನ್ನಾಳಿ – ನ್ಯಾಮತಿ ತಾಲೂಕಿನಾದ್ಯಂತ ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆ ರಗಳೆ ಅಷ್ಟಿಷ್ಟಲ್ಲ. ತಾಲೂಕಿನ ರೈತರಿಗೆ ಶಾಪವಾಗಿ ಪರಿಣಮಿಸಿದೆ.
ಸತತ ಸುರಿಯುತ್ತಿರುವ ಮಳೆಗೆ ತಾಲೂಕಿನ ಬಹುತೇಕ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ತಾಲೂಕಿನಾದ್ಯಂತ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೆ ಸುರಿದ ಚಿತ್ತ ಮಳೆಗೆ ಹಲವು ತೋಟ, ಜಮೀನು, ಮನೆಗಳಿಗೆ
ನೀರು ನುಗ್ಗಿ ಸ್ಥಳೀಯರು ಪರದಾಟ ನಡೆಸಿದರು. ನ್ಯಾಮತಿಯ ಕಂಚಿಗನಾಳ್, ಗಂಜೀನಹಳ್ಳಿ, ಚಟ್ನಹಳ್ಳಿ, ಸೋಗಿಲು ಗ್ರಾಮಗಳ ನಡುವಿನ ರಸ್ತೆಗಳ ಮೇಲೆ ನೀರು ಹರಿದು, ಸಂಪೂರ್ಣ ಬಂದ್ ಆಗಿ ಗ್ರಾಮಸ್ಥರು ಪರದಾಡುವಂತಾಯಿತು.
ನಿರಂತರ ಮಳೆಯಿಂದಾಗಿ ತಾಲೂಕಿನಾದ್ಯಂತ ಇರುವ ಬಹುತೇಕ ಹಳ್ಳ, ಕೆರೆಕಟ್ಟೆ ಹಾಗೂ ಕಾಲುವೆ ಹರಿದಿವೆ. ತಾಲೂಕಿನ ಯರಗನಾಳ್ ಗ್ರಾಮದ ಹೊರವಲಯದಲ್ಲಿರುವ ಗೌಡನಕೆರೆ ನಿರಂತರ ಮಳೆಯಿಂದಾಗಿ ಭರ್ತಿಯಾಗಿದ್ದು ಸೋಮವಾರ ಸಂಜೆ ಕೆರೆ ಕೋಡಿ ಬಿದ್ದು ಕೆರೆಯ ನೀರು ಗ್ರಾಮದ ಮನೆಗಳಿಗೆ ನುಗ್ಗಿ ಹಲವು ಅಪಾರ ಹಾನಿಯಾಗಿದೆ. ಹಲವು ಮನೆಗಳಿಗೆ ಹಾನಿಯಾಗಿದೆ.
ಕೆರೆ ಕೋಡಿ ಬಿದ್ದಿರುವ ಬಗ್ಗೆ ಮಾಹಿತಿ ಇಲ್ಲದೆ ಗ್ರಾಮದ ಹೊರವಲಯದಲ್ಲಿರುವ ಗೌಡನಕೆರೆ ಒಡೆದಿದೆ ಎಂದು ಗ್ರಾಮಸ್ಥರು ಆತಂಕಗೊಂಡಿದ್ದರು ಎಸ್‌ಟಿಆರ್‌ಎಫ್ ತಂಡ, ಅಗ್ನಿ ಶಾಮಕದಳ ತಂಡ ಬಂದು ಪರಿಶೀಲನೆ ನಡೆಸಿ ನಡೆಸಿ ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಗ್ರಾಮದೊಳಗೆ ಹರಿಯುತ್ತದೆ ಎಂದು ತಿಳಿಸಿದೆ. ಇದರಿಂದ ಗ್ರಾಮಸ್ಥರು ಸಮಾಧಾನಗೊಂಡಿದ್ದಾರೆ.