SUDDIKSHANA KANNADA NEWS/ DAVANAGERE/ DATE:28-02-2025
ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಹರಿಸಲು ಆರಂಭಿಸಿ ಸುಮಾರು 60 ವರ್ಷಗಳಲ್ಲಿ ಹಲವು ಬದಲಾವಣೆಗಳಾಗಿದ್ದು, ತಜ್ಞರ ತಂಡವೊಂದನ್ನು ರಚಿಸಿ ಅವರು ನೀಡುವ ವರದಿ ಅನ್ವಯ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕಬ್ಬು ನಿಯಂತ್ರಣ ಮಂಡಳಿಯ ನಾಮ ನಿರ್ದೇಶಿತ ಸದಸ್ಯ ತೇಜಸ್ವಿ ವಿ. ಪಟೇಲ್ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.
ಭದ್ರಾ ಜಲಾಶಯ ನಿರ್ಮಾಣಗೊಂಡ ಸಮಯದಲ್ಲಿ ನಿಗದಿಯಾದ ಅಚ್ಚುಕಟ್ಟು ಮತ್ತು ಬೆಳೆ ಪದ್ಧತಿ ಆಧರಿಸಿ ಬೇಸಿಗೆ ಮತ್ತು ಮಳೆಗಾಲದ ಹಂಗಾಮುಗಳಲ್ಲಿ ನಾಲೆಗಳಿಗೆ ನೀರನ್ನು ಹರಿಸಲಾಗುತ್ತಾ ಬರಲಾಗುತ್ತಿದೆ. ಆರು ದಶಕದ ಈ ಅವಧಿಯಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಬೆಳೆ ಪದ್ಧತಿ, ಅನೇಕ ಕಡೆ ಎತ್ತರದ ಪ್ರದೇಶಗಳಲ್ಲಿ ಮಣ್ಣನ್ನು ಯಂತ್ರಗಳಿಂದ ತೆಗೆದು ಸಮಗೊಳಿಸಿ ನೀರನ್ನು ಹರಿಸಿಕೊಳ್ಳುವುದರ ಮೂಲಕ ಅನಧಿಕೃತವಾಗಿ ಅಚ್ಚುಕಟ್ಟಿಗೆ ಸೇರ್ಪಡೆಯಾಗಿರುವ ಪ್ರದೇಶ, ನಾಲೆಗಳು ನಿರ್ಮಾಣಗೊಂಡ ನಂತರ 2008 ರಲ್ಲಿ ಆಧುನೀಕರಣಗೊಂಡಿದ್ದರೂ ಹಲವುಕಡೆ ನಾಲೆಗಳಲ್ಲಿ ಅಪಾಯಕಾರಿ ಬೆಳವಣಿಗೆಗಳಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ ಮುಖ್ಯನಾಲೆಯಿಂದ ಉಪನಾಲೆಗಳವರೆಗೂ ಅಕ್ರಮ ಪಂಪ್ಸೆಟ್ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಈ ಎಲ್ಲ ಸಂಗತಿಗಳ ಪರಿಣಾಮವಾಗಿ ಪ್ರತೀ ವರ್ಷದಿಂದ ವರ್ಷಕ್ಕೆ ನೀರು ತಲುಪದ ಬಾಧೆಗೊಳಗಾದ ಅಚ್ಚುಕಟ್ಟು ದಿನೇ ದಿನೇ ಹೆಚ್ಚುತ್ತಿದೆ. ಭದ್ರಾ ಅಚ್ಚುಕಟ್ಟಿನ ಪರಿಸ್ಥಿತಿ ಪ್ರಮಾಣದಲ್ಲಿ ಬದಲಾವಣೆಯಾಗಿದ್ದರೂ ಭದ್ರಾ ಜಲಾಶಯ ನಿರ್ಮಾಣ ಸಮಯದಲ್ಲಿ ನಿಗದಿಯಾಗಿದ್ದ ಅಚ್ಚುಕಟ್ಟು ಮತ್ತು ಬೆಳೆ ಪದ್ಧತಿ ಆಧರಿಸಿ ನೀರು ಹರಿಸುವ ಪದ್ಧತಿಯನ್ನು ಪರಿಶೀಲಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಇಂಜಿನಿಯರ್ ಗಳು, ಕೃಷಿ, ತೋಟಗಾರಿಕಾ ತಜ್ಞರು ಹಾಗೂ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡವೊಂದನ್ನು ರಚಿಸಿ ಇಡೀ ಅಚ್ಚುಕಟ್ಟನ್ನು ಸಮೀಕ್ಷೆಗೆ ಒಳಪಡಿಸಿ ತಜ್ಞರು ನೀಡುವ ವರದಿಯನ್ವಯ ಅಚ್ಚುಕಟ್ಟು ಪ್ರದೇಶದಲ್ಲಿ ಅಗತ್ಯ ಕ್ರಮ. ಮಾರ್ಪಾಟುಗಳನ್ನು ಕೈಗೊಂಡಲ್ಲಿ ನಾಲೆಗಳ ಕೊನೇ ಭಾಗದ ರೈತರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಗಮನಾರ್ಹವಾಗಿ ಪರಿಹಾರ ಕಾಣಬಹುದೆಂಬ ವಿಶ್ವಾಸ ಹೊಂದಿದ್ದು ಭದ್ರಾ ಅಚ್ಚುಕಟ್ಟು ಸಮೀಕ್ಷೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ತೇಜಸ್ವಿ ಪಟೇಲ್ ಕೋರಿದ್ದಾರೆ.