SUDDIKSHANA KANNADA NEWS/ DAVANAGERE/ DATE:07-02-2025
ದಾವಣಗೆರೆ: ನ್ಯಾಕ್ ಮಾನ್ಯತೆ ನೀಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಂಧಿತರಾಗಿರುವ ದಾವಣಗೆರೆ ವಿವಿ ಮೈಕ್ರೋ ಬಯಾಲಜಿ ವಿಭಾಗದ ಪ್ರೊ. ಗಾಯತ್ರಿ ದೇವಾರಜ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ದಾವಣಗೆರೆ ವಿವಿಯಲ್ಲಿ ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತಂತೆ ಸುದೀರ್ಘವಾಗಿ ಚರ್ಚಿಸಿ, ಆರು ತಿಂಗಳವರೆಗೆ ಅಮಾನತು ಮಾಡುವಂಥ ನಿರ್ಣಯ ಅಂಗೀಕರಿಸಲಾಗಿದೆ.
ಪ್ರೊ. ಬಿ. ಡಿ. ಕುಂಬಾರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆ ಸಿ ಎಸ್ ಆರ್ ನಿಯಮಗಳ ಪ್ರಕಾರ ಪ್ರೊ. ಗಾಯತ್ರಿ ದೇವರಾಜ ಅವರನ್ನು ಅಮಾನತುಗೊಳಿಸಲಾಗಿದೆ. ಆದೇಶದ ಪ್ರತಿಯನ್ನು ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಕುಂಬಾರ ಅವರು ಮಾಹಿತಿ ನೀಡಿದ್ದಾರೆ.
ಲಂಚ ಪಡೆದ ಆರೋಪದಲ್ಲಿ ನ್ಯಾಕ್ ತಪಾಸಣಾ ಸಮಿತಿಯ ಸದಸ್ಯರೂ ಆಗಿರುವ ಗಾಯತ್ರಿ ದೇವರಾಜ್ ಅವರನ್ನು ಸಿಬಿಐ ಆಂಧ್ರಪ್ರದೇಶದ ಗುಂಟೂರಿನಲ್ಲಿ ಬಂಧಿಸಿತ್ತು. ವಿಶ್ವವಿದ್ಯಾಲಯದ ಕುಲಸಚಿವೆಯಾಗಿಯೂ ಕಾರ್ಯನಿರ್ವಹಿಸಿದ್ದ ಗಾಯತ್ರಿ ದೇವರಾಜ ಅವರ ನಿವಾಸಕ್ಕೂ ಸಿಬಿಐ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು.