SUDDIKSHANA KANNADA NEWS/ DAVANAGERE/ DATE:01-03-2025
ದಾವಣಗೆರೆ: ಭದ್ರಾ ಜಲಾಶಯದ ಕಾಲುವೆ ಮೂಲಕ ಬಿಡುವ ನೀರು ಕೊನೆ ಭಾಗದ ಅಚ್ಚುಕಟ್ಟು ದಾರರಿಗೂ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಭದ್ರಾಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭದ್ರಾ ಜಲಾಶಯದಿಂದ ಅಚ್ಚುಕಟ್ಟು ದಾರರಿಗೆ ನೀರು ಹರಿಸಿ ಒಂದೆರಡು ದಿನಗಳಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು, ಕಾಲುವೆಗಳಿಗೆ ಅನಧಿಕೃತವಾಗಿ ಪಂಪ್ ಅಳವಡಿಸಿ ನೀರೆತ್ತಲಾಗುತ್ತಿದೆ, ಇದರಿಂದ ಕೊನೆ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಅನಧಿಕೃತ ಪಂಪ್ ಗಳನ್ನು ತೆರವು ಮಾಡಿ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗುತ್ತದೆ ಎಂದರು.
ಬೇಸಿಗೆಯಾಗಿರುವುದರಿಂದ ಗೇಟ್ ಗಳಲ್ಲಿ ನೀರಿನ ಸೋರಿಕೆ ಮತ್ತು ಕಾಲುವೆ ದುರಸ್ಥಿಗೆ ಅಗತ್ಯ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ರೈತರಿಗೆ ತಿಳಿಸಿದರು.
ಕಾಲುವೆಗಳ ನೀರು ನಿರ್ವಹಣೆಗೆ ಸಿಬ್ಬಂದಿಗಳ ಕೊರತೆ ಇದ್ದು ಈ ಸಮಸ್ಯೆಯನ್ನು ಬಗೆಹರಿಸಲು ಅಧೀಕ್ಷಕ ಇಂಜಿನಿಯರ್ ಗೆ ಸೂಚಿಸಿದರು.