SUDDIKSHANA KANNADA NEWS/ DAVANAGERE/ DATE:29-03-2025
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ ಹಂತ-4 ರ ಅನುಷ್ಠಾನಕ್ಕೆ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ತಿನ ಗಮನಸೆಳೆದರು.
ಗುರುವಾರ ನಡೆದ ಸಂಸತ್ತಿನ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಪಿಎಂಜೆಎಸ್ ವೈ ಹಂತ 1,2,3,4 ರ ಕುರಿತು ವಿವರವಾಗಿ ತಿಳಿಸುತ್ತಾಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು 2000-01 ರಿಂದ ದಾವಣಗೆರೆ ಜಿಲ್ಲೆಯಲ್ಲಿ 3 ಹಂತಗಳಲ್ಲಿ ಅನುಕ್ರಮವಾಗಿ 536 ಕಿಮೀ, 72 ಕಿಮೀ ಮತ್ತು 179 ಕಿಮೀ ರಸ್ತೆಗಳನ್ನು ಒಳಗೊಂಡಿದ್ದು, ಒಟ್ಟು 788.45 ಕಿಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲ ಹಂತದಲ್ಲಿ 500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. 2ನೇ ಮತ್ತು 3ನೇ ಹಂತಗಳಲ್ಲಿ, ಅಸ್ತಿತ್ವದಲ್ಲಿರುವ ಮಾರ್ಗಗಳ ಮೂಲಕ ಮತ್ತು ಪ್ರಮುಖ ಗ್ರಾಮೀಣ ಲಿಂಕ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಈ ರಸ್ತೆಗಳು ಗ್ರಾಮೀಣ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಬಲೀಕರಣಕ್ಕೆ ಮತ್ತು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಡಿಮೆ ವೆಚ್ಚದಲ್ಲಿ ಸಾಗಿಸಲು ಮಹತ್ವದ ಕೊಡುಗೆ ನೀಡಿವೆ ಎಂದು ವಿವರಿಸಿದರು.
ಪಿಎಂಜಿಎಸ್ ವೈ ಹಂತ-೪ ರ ಯೋಜನೆಯಡಿ, 2011 ರ ಜನಗಣತಿಯ ಪ್ರಕಾರ 500 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಂಪರ್ಕವಿಲ್ಲದ ಜನವಸತಿ ಗ್ರಾಮಗಳಿಗೆ ರಸ್ತೆಗಳನ್ನು ನಿರ್ಮಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಹೊಸ ಮಾರ್ಗಸೂಚಿಗಳನ್ನು ಡಿಸೆಂಬರ್-2024 ರಿಂದ ಜಾರಿಗೆ ತರಲಾಗಿದೆ.ಒಂದು ಗ್ರಾಮಕ್ಕೆ ಈಗಾಗಲೇ ರಸ್ತೆ ಇದ್ದು, ಅದೇ ಗ್ರಾಮಕ್ಕೆ ಮತ್ತೊಂದು ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಲು ಅವಕಾಶವಿಲ್ಲ. ಈ ಹೊಸ ಮಾರ್ಗಸೂಚಿಯಡಿ ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ರಸ್ತೆಗಳು ಅಭಿವೃದ್ಧಿಗೆ ಲಭ್ಯವಿಲ್ಲ, ಆದ್ದರಿಂದ ಅವುಗಳನ್ನು ಗುರುತಿಸಲು ಸಾಧ್ಯವಿಲ್ಲ ಮತ್ತು ಆ ಮೂಲಕ ಗ್ರಾಮ ಸಡಕ್ ಯೋಜನೆಯ 4 ನೇ ಹಂತದ ಅನುಷ್ಠಾನಕ್ಕೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.
ಆದ್ದರಿಂದ, ಮೊದಲ ಮೂರು ಹಂತಗಳಲ್ಲಿ ಅನುಸರಿಸಿದ ಹಿಂದಿನ ಮಾರ್ಗಸೂಚಿಗಳ ಪ್ರಕಾರ ಅಸ್ತಿತ್ವದಲ್ಲಿರುವ ಹದಗೆಟ್ಟ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮತ್ತು ಮೇಲ್ದರ್ಜೆಗೆ ಅವಕಾಶ ಕಲ್ಪಿಸಲು ಗ್ರಾಮ ಸಡಕ್ ಯೋಜನೆ-4 ರ ಮಾರ್ಗಸೂಚಿಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಲು ನಾನು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಮನವಿ ಮಾಡಿದರು.